ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Sunday, January 2, 2011

ಹೊರಗೊಂದಿರೆ ಒಳಗೊಂದು.......?
ಬಾಂದಳದ ತುಂಬೆಲ್ಲಾ
ಕರಿಮೋಡ, ಚಂದ್ರನಿಲ್ಲದ ಆಕಾಶ
ಪಾರಿವಾಳದ ಹುಡುಕಾಟ
ಸಿಗುತ್ತಿಲ್ಲ?
ಗರುಡ ಗುಮ್ಮಗಳ ಆರ್ಭಟ!
ನಲ್ನುಡಿಗಳಿಗೆ ಬರ
ಸಿದ್ಧತೆಗಳ ಮಹಾಪೂರ
ಹಗಲಿಗರ್ಥ ಹುಡುಕುವ ತವಕದಿ
ರಾತ್ರಿಗೆಲ್ಲಾ ವ್ಯವಹಾರ
ಯಾರೋ ಮನದಲ್ಲಿ ಬಿತ್ತಿದ್ದ
ಶಾಶ್ವತ ಸ್ತಂಭ!
ಒಳಗೆಲ್ಲೋ ಹೊಸದೊಂದು
ಉದಯಕ್ಕೆ ಮ್ಲಾನ ಯತ್ನ
ಗುರಿಯಾಯ್ತು ವ್ಯಕ್ತಿ, ಶಕ್ತಿ
ನಿರ್ಜೀವ ಜೀವ ಕಳೆ
ಒಂದಿನಿತು ಅರಿವಿಲ್ಲ
ಎಷ್ಟು ಮುಗ್ದ ಈ ಇಳೆ?!

ಶಹಬಾಷ್, ನಿನ್ನ ಆತ್ಮಶಕ್ತಿಗೆ!
ಮೆಚ್ಚಿದೆ ನಿನ್ನ ಸುಪ್ತ ಸ್ಥೈರ್ಯಕೆ!
ಕೈ ತಟ್ಟುವೆ ನಿನ್ನ ಪ್ರಯತ್ನ ಬಲಕೆ!
ಬೆನ್ನುಜ್ಜುವೆ ನಿನ್ನ ಪೂರ್ವ ತಯಾರಿಗೆ!
ಆದರೆ?!

ಹೊಸರೂಪ ಕೊಡಮಾಡು
ಹೊಸ ದಿಶೆಯ ಗುರಿಮಾಡು
ನಿನ್ನ ಆದರ್ಶದ ಚೌಕಟ್ಟು ಬದಲಿಸು
ಸಾವಿರ ಕೈ ಮುಗಿದಿವೆ ನೋಡು

ತಯಾರಿ ನೇರ, ಉದ್ದೇಶ ಘೋರ
ಸಷ್ಟಿ ಹಗೆಗೆ ಸಮಷ್ಟಿ ಗುರಿಯೆ?
ನೋಡೊಮ್ಮೆ ಓ ಶಕ್ತಿ, ವ್ಯಕ್ತಿ?
ಸಾವಿರ ಕಂಬನಿ ಧರೆಗುದುರಿದೆ ಇಲ್ಲಿ...

ಬದುಕು ಬಯಸಿದಂತಿರದು
ಎಲ್ಲ ಬಯಕೆಯ ಬದುಕು ಒಪ್ಪದು
ಗುರಿ ಕದಲಿಸಿ ಕದ ತೆರೆ
ಇನ್ನೇನೋ ಹೊಸತಿದೆ ಹೆಕ್ಕಿ ನೋಡು?!..

ನಿಮ್ಮ
ದಿನು

(ಜನವಾಹಿನಿ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಕವನ......)

ಚಿತ್ರ ಮೂಲ: ಅಂತರ್ಜಾಲ