ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Sunday, January 2, 2011

ಹೊರಗೊಂದಿರೆ ಒಳಗೊಂದು.......?




















ಬಾಂದಳದ ತುಂಬೆಲ್ಲಾ
ಕರಿಮೋಡ, ಚಂದ್ರನಿಲ್ಲದ ಆಕಾಶ
ಪಾರಿವಾಳದ ಹುಡುಕಾಟ
ಸಿಗುತ್ತಿಲ್ಲ?
ಗರುಡ ಗುಮ್ಮಗಳ ಆರ್ಭಟ!
ನಲ್ನುಡಿಗಳಿಗೆ ಬರ
ಸಿದ್ಧತೆಗಳ ಮಹಾಪೂರ
ಹಗಲಿಗರ್ಥ ಹುಡುಕುವ ತವಕದಿ
ರಾತ್ರಿಗೆಲ್ಲಾ ವ್ಯವಹಾರ
ಯಾರೋ ಮನದಲ್ಲಿ ಬಿತ್ತಿದ್ದ
ಶಾಶ್ವತ ಸ್ತಂಭ!
ಒಳಗೆಲ್ಲೋ ಹೊಸದೊಂದು
ಉದಯಕ್ಕೆ ಮ್ಲಾನ ಯತ್ನ
ಗುರಿಯಾಯ್ತು ವ್ಯಕ್ತಿ, ಶಕ್ತಿ
ನಿರ್ಜೀವ ಜೀವ ಕಳೆ
ಒಂದಿನಿತು ಅರಿವಿಲ್ಲ
ಎಷ್ಟು ಮುಗ್ದ ಈ ಇಳೆ?!

ಶಹಬಾಷ್, ನಿನ್ನ ಆತ್ಮಶಕ್ತಿಗೆ!
ಮೆಚ್ಚಿದೆ ನಿನ್ನ ಸುಪ್ತ ಸ್ಥೈರ್ಯಕೆ!
ಕೈ ತಟ್ಟುವೆ ನಿನ್ನ ಪ್ರಯತ್ನ ಬಲಕೆ!
ಬೆನ್ನುಜ್ಜುವೆ ನಿನ್ನ ಪೂರ್ವ ತಯಾರಿಗೆ!
ಆದರೆ?!

ಹೊಸರೂಪ ಕೊಡಮಾಡು
ಹೊಸ ದಿಶೆಯ ಗುರಿಮಾಡು
ನಿನ್ನ ಆದರ್ಶದ ಚೌಕಟ್ಟು ಬದಲಿಸು
ಸಾವಿರ ಕೈ ಮುಗಿದಿವೆ ನೋಡು

ತಯಾರಿ ನೇರ, ಉದ್ದೇಶ ಘೋರ
ಸಷ್ಟಿ ಹಗೆಗೆ ಸಮಷ್ಟಿ ಗುರಿಯೆ?
ನೋಡೊಮ್ಮೆ ಓ ಶಕ್ತಿ, ವ್ಯಕ್ತಿ?
ಸಾವಿರ ಕಂಬನಿ ಧರೆಗುದುರಿದೆ ಇಲ್ಲಿ...

ಬದುಕು ಬಯಸಿದಂತಿರದು
ಎಲ್ಲ ಬಯಕೆಯ ಬದುಕು ಒಪ್ಪದು
ಗುರಿ ಕದಲಿಸಿ ಕದ ತೆರೆ
ಇನ್ನೇನೋ ಹೊಸತಿದೆ ಹೆಕ್ಕಿ ನೋಡು?!..

ನಿಮ್ಮ
ದಿನು

(ಜನವಾಹಿನಿ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಕವನ......)

ಚಿತ್ರ ಮೂಲ: ಅಂತರ್ಜಾಲ

Friday, July 2, 2010

ಬದುಕೊಂದು ವ್ಯವಕಲನ!!!!!!!!!!




ಬದುಕಿನ ಯಾವುದೋ ಒಂದು ಅಸ್ಥಿರ ಹೆಜ್ಜೆಯಲ್ಲಿ ನಿಂತು, ಹಿಂದಿನ ಹೆಜ್ಜೆಯ ಪರಿಪೂರ್ಣತೆಗಾಗಿ ತವಕಿಸುವ ಪ್ರತಿಯೊಬ್ಬರಲ್ಲೂ ಯಾವುದೋ ಒಂದು ಅವ್ಯಕ್ತ ಅಂಶವನ್ನು ಕಳೆದುಕೊಂಡಿದ್ದೇವೆ ಎಂಬ ಭಯ. ಸತ್ಯದಲ್ಲಿಯೂ ಅಸತ್ಯದ ಅಸಹಾಯಕತೆ!. ಬಾಲ್ಯದಲ್ಲಿದ್ದ ಕುತೂಹಲ, ರಗೋರಿ ಆಟದ ನೆನಪು, ದುಂಬಿಯ ಬಾಲಕ್ಕೆ ನೂಲು ಕಟ್ಟಿ ಅದರ ಚಟುವಟಿಕೆ ನೋಡಿ ಹಿಂಸೆ ಕೊಡುತ್ತಿದ್ದೇನೆ ಅಂದುಕೊಂಡರೂ ನಲಿದಾಡುತ್ತಿದ್ದ ವಿಕ್ಷಿಪ್ತ ಮನ:ಸ್ಥಿತಿ, ಎಲ್ಲವೂ ಎಷ್ಟೋ ದೂರ ಸರಿದಿರುತ್ತದೆ. ಕೆಲವೊಮ್ಮೆ ಹುಡುಕಿದರೂ ಕೇವಲ ಕಲ್ಪನೆಗೆ ನಿಲುಕುವಷ್ಟು.....!. ಮಕ್ಕಳಿದ್ದಾಗ ನಾವೆಲ್ಲ ವಿಶ್ವಮಾನವರು. ದೊಡ್ಡವರಾದಂತೆ ವಿಶ್ವ ಮಾತ್ರ ನಮ್ಮದು!. ಚಿಕ್ಕಂದಿನಲ್ಲಿ ಯಾವ ವಿಷಯ ಮನಸಿಗೆ ಬಂದರೂ ಅದರ ಕುರಿತಾಗಿ ಯೋಚಿಸುವ ತವಕ. ಕಣ್ಣಿಗೆ ಕಂಡದ್ದನ್ನು ನೋಡಿ ವಿಶ್ಲೇಷಿಸುವ, ಇಲ್ಲದಿದ್ದ ಪಕ್ಷದಲ್ಲಿ ನೋಡಿ ಖುಷಿ ಪಡುತ್ತಿದ್ದ ದಿನಗಳು. ಆದರೆ ಜೀವನದ ಪ್ರತಿ ಹೆಜ್ಜೆ ಚಲನೆ ಕಂಡಾಗಲೂ ನಮ್ಮ ಬದುಕು constrained ಅನ್ನಿಸಿಬಿಡುತ್ತೆ. ಬೆಳಿಗ್ಗೆ ಹೊರಟರೆ ಸಾಯಂಕಾಲ ಮನೆಗೆ, ಎದ್ದ ತಕ್ಷಣ ಪ್ಯಾಂಟು, ಶರ್ಟ್, ಸೀರೆ, ಕುಪ್ಪಸ, ಚೂಡಿದಾರ, ಬೂಟಿಗೆ ಪಾಲಿಶ್....ಇದೇ ವ್ಯವಹಾರಿಕ ಯೋಚನೆಗಳು. ಮಗು ಹತ್ತಿರ ಬಂದರೆ, ಶಾಲೆಗೆ ಹೋಗಿ ಬಾ ಪುಟ್ಟ, ಸಂಜೆ ಆಡೋಣ ಎಂಬ ಆಶ್ವಾಸನೆ. ಮಗು ಹುಟ್ಟಿದ ದಿನದಿಂದಲೂ ಈ ಆಶ್ವಾಸನೆ ಇದ್ದದ್ದೆ!!. ಚಿಕ್ಕವರಿದ್ದಾಗ ಅಗಸ್ಟ್ ೧೫ರ ಧ್ವಜಾರೋಹಣ, ನವಂಬರ್ ೧೪ರ ಮಕ್ಕಳ ದಿನಾಚರಣಿ....ಹೀಗೆ ಎಲ್ಲವೂ ಖುಷಿ ಕೊಡುತ್ತಿತ್ತು. ದೊಡ್ಡವರಾದ ಮೇಲೆ ಈ ಬಗ್ಗೆ ಯೋಚಿಸುವಷ್ಟು ಸಹ ಕುತೂಹಲ, ಆಸಕ್ತಿ, ಪುರುಸೊತ್ತು ಯಾವುದೂ ಇಲ್ಲದಂತ ಪರಿಸ್ಥಿತಿ. ನಾವೇನನ್ನೋ ಮೀರಿ ಬಂದಿದ್ದೇವೆಂಬ ಭಾವ. ಒಂತರಾ ಪೂರ್ಣತೆಯಿಂದ ಅಪೂರ್ಣತೆಯತ್ತ ಪಯಣ..!. ಬದುಕಿನಲ್ಲಿ ಒಮ್ಮೆ ವ್ರದ್ದಾಪ್ಯ ಸಮೀಪಿಸಿದರೆ ಕಳೆದು ಬಂದ ದಿನಗಳಲ್ಲಿ, ಕಳೆದು ಕೊಂಡ ಎಷ್ಟೋ ಅಂಶಗಳು ನೆನಪಾಗುತ್ತೆ. ನದಿಯ ತೀರದಲ್ಲಿ ಕುಳಿತು ನದಿಯ ನೀರಿನ ಅಳತೆ ಮಾಡಿದಂತೆ, ಕೈಗೆ ಸಿಗದ, ಮನಕ್ಕೆ ನಿಲುಕದ ಸಾವಿರ ಯೋಚನೆಗಳು. ಹಿಂದೆ ತಾನು ಓಡಾಡಿದ ಮಾರ್ಗದ ದೂಳನ್ನು ಸಹ ಕೆಣಕದಷ್ಟು ದೌರ್ಬಲ್ಯ. ತನ್ನದೇ ಸ್ರಷ್ಟಿ ಮುನಿದರೆ ವಿಷ್ಯ ಮತ್ತಷ್ಟು ತೀವ್ರವಾಗುತ್ತೆ.

ಹೀಗೆ ಮಕ್ಕಳಿದ್ದಾಗ ಪ್ರಕ್ರತಿಯನ್ನು, ದೈನಂದಿನ ಬದಲಾವಣಿಗಳನ್ನು ಆಸ್ವಾದಿಸುತ್ತಿದ್ದ ವ್ಯವದಾನ, ದಿನ ಕಳೆದಂತೆ quite common ಅನ್ನಿಸಿಬಿಡುತ್ತೆ. ಆದರೆ ಬದುಕಿನ ಬದಲಾವಣಿಗಳ ಎಷ್ಟೋ ಅಂಶಗಳು ಹಳತು ಎನ್ನಿಸುತ್ತವೆಯಾದರೂ ಕೊನೆಗೆ ರುಚಿಯಾಗುವಂತದ್ದು ಪ್ರೀತಿ, ವಿಶ್ವಾಸ ಮಾತ್ರ. ಇದು ಹಣ್ಣಿಗಿಟ್ಟ ಹಲಸಿನ ಕಾಯಿಯ ಹಾಗೆ, ಹಣ್ಣಾಗ ಹೊರಟ ಹುಣಸೆ ಹುಳಿಯ ಹಾಗೆ. ಇದು ಎಷ್ಟು ರುಚಿಯಾಗಿರುತ್ತೆ ಅಂದರೆ, ಕೊನೆ ಗಳಿಗೆಯಲ್ಲಿ ಎಳೆದು ಧಮ್ ತೆಗೆದುಕೊಳ್ಳುವ ಮುಂಡು ಬೀಡಿಯ ಹಾಗೆ!. ಚಿಕ್ಕವರಿದ್ದಾಗ ಎಲ್ಲರೊಂದಿಗೆ ಬೆರೆತು, ಪಾಪು-ಪುಟ್ಟ ಅನ್ನಿಸಿಕೊಳ್ಳುತ್ತ, ಅಪ್ಪ, ಅಮ್ಮ, ಅಣ್ಣ, ಮಾವ, ತಂಗಿ, ಅಕ್ಕ, ಅಜ್ಜ, ಅಜ್ಜಿ ಎಲ್ಲರೊಂದಿಗೆ ಬೆರೆಯುವ ಅವಕಾಶವಿರುತ್ತೆ. ದಿನ ಕಳೆದಂತೆ ಎಲ್ಲವೂ ಸೀಮಿತ ಅರ್ಥ ಕಂಡುಕೊಳ್ಳುತ್ತೆ. ಯಾವಾಗಲೋ ಸಮಯ ಸಿಕ್ಕಾಗ ಮನೆ, ಮನೆಯವರೊಡನೆ ಸಂಭಾಷಣಿ. ಇಲ್ಲದಿದ್ದಲ್ಲಿ ಎಲ್ಲರೂ ಸೇರುವ ಸಂದರ್ಭ ಶುಭ ಸಮಾರಂಭದಲ್ಲಿ ಮಾತ್ರ. ಹೀಗೆ ದಿನಗಳುರುಳಿದಂತೆ ಬದುಕಿನ ವ್ಯವಕಲನ ತೀವ್ರವಾಗುತ್ತೆ. ಕಳೆದುಕೊಂಡ ಅಂಕೆಗಳು ಲೆಕ್ಕಕ್ಕೆ ಸಿಗದಷ್ಟು ದೂರ ಹೋಗಿರುತ್ತೆ. ನಮ್ಮವರು ಎಂದು ಕೊಂಡವರೆಲ್ಲಾ ಟೆಲಿಪೋನ್ ಮಿತ್ರರಾಗುತ್ತಾ ಹೋದಂತೆ, ಭಾವನಾತ್ಮಕ ಸಂಬಂದದ ತೀವ್ರತೆ ಕಮ್ಮಿಯಾಗುತ್ತೆ. ಆದರಿದುಅನಿವಾರ್ಯ. ಅವಸರದ ಓಟದ ಬದುಕಿನಲ್ಲಿ ತಂದೆ, ತಾಯಿಯವರ ಅನಾರೋಗ್ಯಕ್ಕೂ ಸ್ಪಂದಿಸದಷ್ಟು ಕೆಲಸ. ಬದುಕು ದಿನ ಕಳೆದಂತೆ ಸಂಘರ್ಷ ಪೋಣಿತವಾಗುತ್ತೆ. ಆಗ ಬದುಕಿನ ಭಾವನಾತ್ಮಕ ಮುಖಕ್ಕಿಂತ ಕಾರ್ಯೋನ್ಮುಖ ಮುಖ ಮುಖ್ಯವಾಗುತ್ತೆ. ಆದರೊಂದು ಮಾತು.......ಬದುಕು ಯಾವ ಸ್ಥರದತ್ತ ಓಡಿದರೂ ಅದು ಬದುಕಿನ ದಿನಗಳ ಉಳಿವಿಕೆಗಾಗಿ. ಅದು ಉಳಿಯಬೇಕೆಂದರೆ ಪರಿಸರದ ಬದಲಾವಣಿಗಳ ಜೊತೆ ಭಾವನಾತ್ಮಕ ಸ್ಪಂದನವಿರಬೇಕಾದದ್ದು ಅನಿವಾರ್ಯ. ಅದಿಲ್ಲದಿದ್ದರೆ ವ್ಯವಕಲನ ಬದುಕಿನ ಅರ್ಥವನ್ನೇ ಕಳೆಯುವುದರಲ್ಲಿ ಸಂಶಯವಿಲ್ಲ, ಅಲ್ವಾ?.......

ದಿನು
Note: Image from Internet

Saturday, April 3, 2010

ದೂರವಾಣಿಯ ದೂರದ ರಿಂಗಣದೊಂದಿಗೆ.........


ಆ ಒಂದು ಗಳಿಗೆ ಯಾವಾಗಲೋ ಹೇಳಬೇಕೆನಿಸಿದ್ದನ್ನು ಹೇಳಲು ಅವಕಾಶ ಮಾಡಿಕೊಡುತ್ತೆ. ಎಷ್ಟೋ ಬಾರಿ ದೂರದವರನ್ನು ಹತ್ತಿರವಾಗಿಸುತ್ತೆ. ಸಂಬಂಧಗಳನ್ನು ಸಂಧಿಸಿ ಬಿಡುತ್ತೆ. ಅದರ ಕೂಗಾಟ ದೂರದ ದ್ವನಿ ನಿನ್ನದೇ ಎನ್ನುವಂತೆ ಅಣಕಿಸುತ್ತೆ. ಬಚ್ಚಿಟ್ಟ ಭಾವನೆಗಳಿಗೆ ಚಿತ್ತಾರದ ಬಯಲನ್ನು ನೀಡಿ ವ್ಯ್ಯಾಪಿಸಿಕೊಳ್ಳಲು ಅನುವು ಮಾಡುತ್ತೆ. ಎಷ್ಟೋ ಬಾರಿ ದೂರವಾಣಿ ಜೀವ ಬಂದು ಮಾತನಾಡುತ್ತೆ ಅನ್ನಿಸುವಷ್ಟು ಅವ್ಯಕ್ತವಾಗುತ್ತೆ. ತೀರದ ಬಯಕೆಗಳು, ಮಾಸದ ನೆನಪುಗಳು, ದೂರಾದ ಭೇಟಿ, ಅನಿವಾರ್ಯತೆಯ ಅಂತರ....ಇವುಗಳನ್ನೆಲ್ಲವನ್ನು ಒಂದೇ ಕತ್ತರಿಯಡಿಯಲ್ಲಿ ಜೋಡಿಸಿ, ಇಗೋ ಮರೆಯದಿರು ಎನ್ನುವಂತೆ ಆಗಾಗ ಚೀರಾಟ ಮಾಡೋದನ್ನು ಕಂಡಾಗ ಓಡಿ ಹಿಡಿಯಬೇಕೆನಿಸುತ್ತೆ. ಕೈಯಲ್ಲಿ ಹಿಡಿ ನೆನಪನ್ನು ಹಿಡಿದಷ್ಟು ಅನುಭವ!!.

ಬದುಕಿನ ಬದಲಾವಣಿಗಳೇ ಹೀಗೆ. ಹತ್ತಿರವಿದ್ದಾಗ ಮಾತ್ರ ನೈಜತೆ. ಮತ್ತೆಲ್ಲವೂ ಅವ್ಯಕ್ತ. ಭಾವನೆಗಳನ್ನು, ಸಂಬಂಧಗಳನ್ನು ಯಕಶ್ಚಿತ್ ಒಂದು ಯಂತ್ರ ಹಿಡಿದಿಡುವ ರೀತಿ ಇದೆಯಲ್ವಾ, ಅದು ಎಲ್ಲರನ್ನು ಯಾವುದೋ ಪ್ರಶ್ನೆಯಡಿಯಲ್ಲಿ ನೂಕಿಬಿಡುತ್ತೆ. ಯಾವುದೋ ಒಂದೆಡೆ ಪುಸ್ತಕಗಳ ನಡುವೆ ಕುಳಿತಿದ್ದಾಗ, ಕೂಗಿ ಸಂಬಂಧಿಕರನ್ನು ಪರಿಚಯ ಮಾಡಿಕೊಡುವ ದೂರವಾಣಿಯನ್ನು ಕಂಡಾಗ ಯಾವುದೋ ಕಾಲದ ಸ್ನೇಹಿತ ಅನ್ನಿಸಿಬಿಡುತ್ತೆ. ಅನಿವಾರ್ಯತೆಯ ಸಂದರ್ಭದಲ್ಲಿ ಮನುಷ್ಯ ಅವಲಂಬನೆಯಾಗುವ ರೀತಿ ಒಂತರಾ ವಿಶೇಷ. ಅವಸರದ ಬದುಕಿನಲ್ಲಿ ಎಲ್ಲ ಸಂಬಂಧಗಳ ಬಗೆಗಿನ ವಿಚಾರಗಳನ್ನು ಮುಖಾಮುಖಿಯಾಗಿ ಚರ್ಚಿಸುವುದು ಕಷ್ಟಸಾದ್ಯ. ಆಗ ಸಂಬಂಧಗಳ ಕೊಂಡಿಯನ್ನು ಬೆಸೆಯುವಂತದ್ದು ಈ ಸ್ನೇಹಿತ. ಕೆಲವೊಮ್ಮೆ ನೆನಪುಗಳು ನಿರೀಕ್ಷೆಗಳಾಗಿ ಕಾಡುತ್ತಿರುವಾಗ, ಅವಸರದ ವಿಷಯದ ವಿಲೇವಾರಿಗೆ ಕಾಯುತ್ತಿದ್ದಾಗ, ಪ್ರೀತಿ ಹೆಪ್ಪುಗಟ್ಟಿ ಕಾದು ಕುಳಿತಿದ್ದಾಗ, ಸ್ನೇಹ ಸಾಕ್ಷಿಯಾಗಿ ಶುಭಾಶಯ ಮನದ ಮೂಲೆಯಲ್ಲಿ ಸರಿಯಲು ಅಣಿಯಾಗುತ್ತಿದ್ದಾಗ, ಯಾವುದೋ ಅಚಾನಕ್ ಸುದ್ದಿ ಆಶ್ಚರ್ಯಕ್ಕಾಗಿ ಕಾಯುತ್ತಿದ್ದಾಗ....ಮೊಳಗುವ ಆ ದ್ವನಿ ಎಷ್ಟೋ ಹ್ರದಯಗಳ ಬಡಿತವನ್ನು ಕಡಿಮೆ ಮಾಡಿಸುತ್ತೆ. ಕೆಲವೊಮ್ಮೆ ಹೆಚ್ಚಿಸಿ ಬಿಡುತ್ತೆ. ವ್ಯವಹಾರವನ್ನು ಸಲೀಸಾಗಿಸುತ್ತೆ. ಬಹುಶ: ಅವಸರದ ಬದುಕಿನ ಮನುಷ್ಯನ ಬಹುದೊಡ್ಡ ಒಡನಾಡಿ ಈ ದೂರವಾಣಿ!

ಕೆಲವೊಮ್ಮೆ ದೂರವಾಣಿ ಮುನಿಸಿಕೊಂಡ, ಅನಿವಾರ್ಯತೆಯ ಸುದ್ದಿ ತಿಳಿಯದೆ ಒದ್ದಾಡುವ ರೀತಿ ಇದೆಯಲ್ವಾ...ಆಗ ದೂರವಾಣಿಯ ರಿಂಗಣ ತುಂಬಾ ಹತ್ತಿರವಾದದ್ದು, ವ್ಯಾಪಕವಾದದ್ದು ಅನ್ನಿಸುತ್ತೆ. ಎಷ್ಟೋ ದೂರದ ಭಾವನೆಗಳನ್ನು, ಘಟನೆಗಳನ್ನು ಕುಳಿತಲ್ಲಿಗೆ ಕರೆದು ಹೇಳುವ Sincearity ಇದರದ್ದು. ಇದು best friend ಎಂಬ ಮನವರಿಕೆಯಿಂದಲೋ ಏನೋ...mobile phone ಅರಂಭವಾದದ್ದು!. ಈಗ ಈ ದನಿ ನಮ್ಮ ಬದುಕಿನ ಅಂಗವಾಗಿ ಬಿಟ್ಟಿದೆ. ಆದರೊಂದು ಜಿಜ್ನಾಸೆ.......ದೂರವಾಣಿ ಇರುವ ಮೊದಲು ಸಂಬಂಧಗಳು ಗಟ್ಟಿಯಾಗಿ ಇರಲಿಲ್ವಾ?..ಉತ್ತರ ಸುಲಭ. ಆಗ ಪ್ರಪಂಚ ನಮ್ಮ ಮನೆ, ನಮ್ಮ ಗ್ರಾಮ...ಅಷ್ಟಕ್ಕೆ ಸೀಮಿತವಾಗಿತ್ತು. ಆದರೀಗ ಅಣ್ಣ ಅಮೇರಿಕದಲ್ಲಿದ್ದರೆ, ತಮ್ಮ ಕುಂದಾಪುರದಲ್ಲಿ... ಅಗತ್ಯದ ವಿಷಯವನ್ನು ತಿಳಿಸಲು ಅಂಚೆಯನ್ನೇ ಅವಲಂಬಿಸುವುದಾದರೆ ಹಲವಾರು ದಿನ ಕಳೆದೀತು. ಆದರಿಂದು ಈ ಬಗೆಯ ಸಂದರ್ಭದಲ್ಲಿ ಆಪತ್ಕಾಲದ ಬಂಧುವಾಗಿ, ಭಾವನಾತ್ಮಕ ಕೊಂಡಿಯಾಗಿ, ವ್ಯವಹಾರಿಕ ಏಜೆಂಟ್ ಆಗಿ ದೂರವಾಣಿ ಕೆಲಸ ಮಾಡುತ್ತೆ. ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಇನ್ನೊಂದಕ್ಕೆ ಹೊಂದಿಕೊಳ್ಳೋದು, ಅವಲಂಬಿಸೋದು ಸ್ವಾಭಾವಿಕ ಅನ್ನಿಸುತ್ತೆ. ಸಂಘ ಜೀವಿ ಎನಿಸಿಕೊಂಡದ್ದು ಮನುಷ್ಯ ಸ್ವಾರ್ಥಕ್ಕಾಗಿ....!. ಅಲ್ಲೂ ಲಾಭವಿದೆ. ಇಲ್ಲದಿದ್ದಲ್ಲಿ ನಾವು ಕುರಿ, ಕತ್ತೆ, ಕೋಳಿಗಳಾಗಿ ಬದುಕುತ್ತಿದ್ದೆವೋ ಏನೋ.....ಆಗ ದೂರವಾಣಿಯ ರಿಂಗಣ ಪ್ರಾಂಗಣವನ್ನು ಮುಟ್ಟುತ್ತಿರಲಿಲ್ಲ, ಮನದ ಅಂಗಣವನ್ನು ತಟ್ಟುತ್ತಿರಲಿಲ್ಲ....ಅಲ್ವಾ?

ನಿಮ್ಮ
ದಿನು

Wednesday, March 24, 2010

ಮನಸೇ.....ನೀನೆಷ್ಟು ಅಸ್ಥಿರ....!

ಕಳೆದ ವರ್ಷ ಆಚರಿಸಿದ ಗಣೀಶ ಚತುರ್ಥಿ, ಮೊನ್ನೆ ಮೊನ್ನೆ ಆಚರಿಸಿದ ಮಂಗಳವಾರದ ಸಂಕಷ್ಟಿ ವ್ರತ, ಪ್ರತಿ ದಿನವೂ ಮುಖ ನೋಡಿ ಸಂತಸ ಪಡುತ್ತಿದ್ದ ಭಾವ, Blue oceanನಲ್ಲಿ ತೆಗೆದ ಪ್ಯಾಂಟು, ಪಾರಿಜಾತದಲ್ಲಿ ತಿಂದ ಸ್ವೀಟು, ಗೀತಾಂಜಲಿಯಲ್ಲಿ ಕಂಡ ಚಲನಚಿತ್ರ, ಮರವಂತೆಯಲ್ಲಿ ಕುಣಿದಾಡಿದ ಸಮುದ್ರ ತೀರ, ಸೋಮೇಶ್ವರದಲ್ಲಿ ಮೌನ ಸಂತಸ ಅನುಭವಿಸಿದ ಪರಿಸರ, ರೈಲಿನ ಚುಕುಬುಕು ಸದ್ದಿನೊಂದಿಗೆ ಸಂತಸದ ಅಲೆಯನ್ನು ತೇಲಿಬಿಟ್ಟ ಪ್ರವಾಸ, ಮೊನ್ನೆಯವರೆಗೂ ಇಷ್ಟವಾಗುತ್ತಿದ್ದ ಚಾಕಲೇಟುಗಳು, ಬೇಡವೆಂದರೂ ಇಷ್ಟವಾಗುವ ಕನಸುಗಳು, ಪದೇ ಪದೇ ಕೈತಟ್ಟಿ ಬದುಕನ್ನು ಸಂತಸದ ಬುಗ್ಗೆಯಾಗಿಸುವ ನೆನಪುಗಳು......ಹೀಗೆ ಆ ಗಳಿಗೆಯಲ್ಲಿ ಮನಸ್ಸಿಗೆ ಇಷ್ಟವಾದದ್ದು, ಮರುಗಳಿಗೆಯಲ್ಲಿ ಅವ್ಯಕ್ತ ಅನ್ನಿಸುತ್ತೆ. ಯಾವ ಮಾಪನದಿಂದಲೂ ಅಳೆಯಲಾಗದಷ್ಟು ವೇಗದ ಯೋಚನೆಗಳು. ಈಗ ಕುಂದಾಪುರವಾದರೆ ಮರುಕ್ಷಣ ಮನಸ್ಸು ಅಮೇರಿಕಾದಲ್ಲಿರುತ್ತೆ. ಯಾವ ನಿರ್ಭಂದವೂ ಇಲ್ಲದ, ಸಲೀಸಾಗಿ ತಿರುಗಾಡಬಲ್ಲ ಚಲನಶೀಲ ವಸ್ತುವೆಂದರೆ ಬಹುಶ: ಇದೇ ಇರಬೇಕು. ಯಾವ ಸ್ಥಿರ ಯೋಚನೆಯೂ ಮನುಷ್ಯನ ಮನಸ್ಸಿನಲ್ಲಿ ಶತಾಂಶ ಹಿಡಿದಿಡಲು ಅಸಾದ್ಯ ಅನ್ನಿಸುತ್ತೆ. ಯಾಕೆ ಹೀಗೆ ಬದಲಾವಣಿಯ ಬಿಸಿ ಮನಸ್ಸನ್ನು ತಟ್ಟುತ್ತೆ ಎನ್ನುವುದೇ ಪ್ರತಿದಿನದ ಪ್ರಶ್ನೆಯಾಗಿರುತ್ತೆ. ಬದಲಾವಣಿಗಳೇ ಇಲ್ಲದ ಸ್ಥಿರ ಮನಸ್ಸು ಬದುಕಿಗೆ ಜಡತ್ವ ಕೊಟ್ಟಿರುತ್ತೆ!.

ಅನಿವಾರ್ಯವಾದಾಗ ಮಾತ್ರ ಮನಸ್ಸನ್ನು ಅನ್ಯ ವಿಚಾರದ ಕಡೆಗೆ ಸರಿಸಬೇಕು. ಕೆಲವೊಮ್ಮೆ ನೋವುಗಳು, ನಿರಾಶೆಗಳು, ನೆನಪುಗಳು, ಕನಸುಗಳು ಬೇಡವೆಂದರೂ ಮನದ ಬಯಲನ್ನು ಅಪ್ಪಿಕೊಳ್ಳುತ್ತೆ. ಇನ್ನು ಕೆಲವು ಬಾರಿ ಮನಸ್ಸಿನ ಸ್ಥಿರ ಭಾವ ಬದುಕಿಗೆ ಅರ್ಥ ಕೊಡುತ್ತೆ. ಕಾಣದ ಬಯಕೆಗಳು ಮನಸ್ಸನ್ನು ಸೇರಿ ಅಸ್ಥಿತ್ವಕ್ಕಾಗಿ ತಡಕಾಡುವಾಗ ಮನಸ್ಸನ್ನು ಸ್ಥಿರ ವಿಷಯಗಳತ್ತ ಕೇಂದ್ರೀಕರಿಸಬೇಕಾಗುತ್ತೆ. ಅಲ್ಲೂ ವಿಫಲತೆ ಕಾಡಿದರೆ.....ಮನಸ್ಸನ್ನು ಸಾಂತ್ವನಗೊಳಿಸುವ ಕಾಯಕ ಬುದ್ಧಿಯಿಂದಾಗಬೇಕು. ಮನಸ್ಸಿನಲ್ಲಿ ಮೂದಿದ ಎಲ್ಲಾ ಭಾವನೆಗಳನ್ನು ಬುದ್ದಿಯೆಂಬ ಕನ್ನಡಿಯ ಮೇಲೆ ಪ್ರತಿಫಲಿಸಿ ನೋಡುವಂತವರಾಗಬೇಕು. ಅಲ್ಲೂ ಮಿಥ್ಯ ಪ್ರತಿಬಿಂಬ ಕಾಡಿದರೆ...ವಾಸ್ತವದ ಕಹಿಯನ್ನು ಅನುಭವಿಸಲು ವೇದಿಕೆಯನ್ನು ನಿರ್ಮಿಸಿಕೊಳ್ಳಬೇಕು. ಬದುಕಿನ ಏರಿಳಿತಗಳ ನಡುವೆ ಹೊಂದಿಕೊಳ್ಳುವ ಮನ:ಸ್ಥಿತಿಯನ್ನು ನಾವೇ ನಿರ್ಮಿಸಿಕೊಳ್ಳಬೇಕು. ಎಷ್ಟೆಂದರೂ, ನಮ್ಮ ಬದುಕಿನ ನಿರ್ಮಾತ್ರರು ನಾವೇ ಆಗಿರುವಾಗ, ನಮ್ಮ ಮನಸ್ಸಿನ ಯೋಚನೆ-ಯೋಜನೆಗಳ ನಿರ್ಮಾತ್ರರು ನಾವೇ ಆಗದಿದ್ದಲ್ಲಿ ಬದುಕು ಹಸನಾಗುವುದಾದರೂ ಹೇಗೆ?.

ಅದೇನೆ ಇರಲಿ. ಓ ಮನಸೇ......ನಿಜವಾಗಿಯೂ ನಿನ್ನ ವಿಸ್ತಾರಕ್ಕೆ, ವಿಶಾಲಕ್ಕೆ, ಚಲನಶೀಲತೆಗೆ, ವ್ಯಾಪಕತೆಗೆ, ನಿರಂತರತೆಗೆ, ನಿತ್ಯಾಚಾರಕ್ಕೆ, ಸ್ಪಂದನಕ್ಕೆ, ಸಾರ್ವಬೌಮತ್ವಕ್ಕೆ, ಕ್ಷಣಿಕತೆಗೆ, ನಿರ್ಲಿಪ್ತತತೆಗೆ, ಒಂಟಿತನಕ್ಕೆ, ವೈಶಿಷ್ಟತೆಗೆ ಬೆರಗಾಗಿ ಎಷ್ಟೋ ಬಾರಿ ಯೋಚಿಸಿದ್ದೇನೆ!. ಅಲ್ಲೂ ನಿನ್ನದೇ ಇಣುಕು ನೋಟ ಕಾಡುತ್ತಿರುತ್ತದೆ. ಬದುಕಿನ ಪ್ರತಿ ಹೆಜ್ಜೆಗಳು ನಿನ್ನ ನಿರ್ಧಾರದ ಮೇಲೆಯೇ ಪ್ರತಿಫಲಿತವಾಗುತ್ತೆ. ಅದೆಷ್ಟೋ ಯೋಚಿಸಿದ ಮೇಲೆ ನಿನ್ನನ್ನು ಅಸ್ಥಿರ ಎನ್ನದೆ ಬೇರೆ ದಾರಿಯಿಲ್ಲ. ಅದರೂ....ಮನಸ್ಸಿನ ಅಸ್ಥಿರತೆ ಬದುಕಿಗೆ ವ್ಯಾಪಕತೆ ಕೊಟ್ಟಿದೆ. ಕೆಲವೊಮ್ಮೆ ಸಮತಲಕ್ಕಿಂತ ವಕ್ರ ಮೇಲ್ಮೈ ಸೌಂದರ್ಯ ಅನ್ನಿಸುತ್ತೆ. ನುಣುಪು ಹೆಚ್ಚಾದಂತೆಲ್ಲಾ ಜಾರುವಿಕೆ ಹೆಚ್ಚುತ್ತೆ. ಅದರೆ....ವಕ್ರತೆಯೂ ಬದುಕಿನ ಸರ್ವಸ್ವ ಆಗಲಾರದು. ಆದರೂ ಅರ್ಧ ಸತ್ಯವನ್ನು ಮಾತ್ರ ಬಿಚ್ಚಿಡುತ್ತೆ. ಒಟ್ಟಾರೆ ಮನಸ್ಸಿನ ಅಸ್ಥಿರತೆಯೂ ಒಂತರಾ ದ್ವಂದ್ವ ಅನ್ನಿಸುತ್ತೆ ಅಲ್ವಾ?..

ನಿಮ್ಮ
ದಿನು

Thursday, March 18, 2010

Something is better than Nothing....?


ಮನದ ಬೊಗಸೆಯಲ್ಲಿ ಹುದುಗಿಟ್ಟ ಪೀತಿ, ಹ್ರದಯ ಕುಕ್ಷಿಯಲ್ಲಿ ಅಡಗಿಸಿಟ್ಟ ಸ್ನೇಹ, ಕಾಣದ ಗಳಿಗೆಯಲ್ಲಿ ಮೂಡುವ ಸಂಬಂಧ, ಯಾವುದೋ ತೀರದಲ್ಲಿ ಸ್ಪಂದಿಸುವ ಭಾವಗಳು.....ಹೀಗೆ ನೂರಾರು ಮೈಲು ದೂರದ ಬಾಳ ಪಥದ ಹೆಜ್ಜೆಗಳು. ಬದುಕಿನಲ್ಲಿ ಪಡೆದಿದ್ದೇವೆ ಎಂದುಕೊಳ್ಳುವಾಗಲೇ ಕಳೆದುಕೊಂಡದ್ದು ನೆನಪಾಗುತ್ತೆ. ಕಪ್ಪನೆಯ ಹಾಸಿನ ನಡುವೆಲ್ಲೋ ಬಿಳಿ ಕೂದಲು ತನ್ನ ಅಸ್ಥಿತ್ವ ತೋರಿಸೋಕೆ ಯತ್ನಿಸುತ್ತೆ. ನಾವು ಬಯಸಿದ ಕಾರ್ಯಗಳು ಬಯಸಿದಂತೆಯೇ ಆಗಿರುತ್ತಿದ್ದರೆ ಇಷ್ಟೆಲ್ಲಾ ದೇವಸ್ಥಾನಗಳ ಅವಶ್ಯಕತೆ ಇರುತ್ತಿತ್ತಾ ಹೇಳಿ?. ಪಡೆದದ್ದು, ಪಡೆಯಲಾಗದ್ದು, ಪಡೆಯಬೇಕೆಂದುಕೊಂಡದ್ದು....ಎಲ್ಲವೂ ವಿರಳ ಹಾದಿಯ ಪ್ರಬಲ ಪಾತ್ರಗಳು. ಬದುಕಿನ ಯಾವುದೋ ಒಂದು ದಿನ ಕೈಗೊಂಡ ನಿರ್ಧಾರ ಅಚಾನಕ್ ಫಲಿಸದೇ ಇದ್ದಾಗ ಅದರ ಒಳತಿರುವನ್ನು ಪ್ರಶ್ನಿಸುವಮ್ತವರಾಗಬೇಕು. ಆಗ ಎಲ್ಲೂ ಅಪೂರ್ಣತೆ ತಲೆ ಎತ್ತಲು ಅಸಾದ್ಯ. ಯಾಕೋ ಒಂತರಾ ವಿಚಿತ್ರ ವಾಕ್ಯಗಳನ್ನು ಜೋಡಿಸುತ್ತಿದ್ದೇನೆ ಅನ್ನಿಸುತ್ತಾ?. ಇದರ ಹಿಂದೆ ವೈಚಾರಿಕತೆಯಿದೆ, ಕಾರಣಗಳಿವೆ.


ಬದುಕಿನ ಯಾವುದೋ ಒಂದು ಕ್ಷಣ ಬದುಕನ್ನೇ ಪಡೆದಂತೆ ಇರುತ್ತೇವಲ್ಲ, ಅದು ಮುಖ್ಯ ಅನ್ನಿಸುತ್ತೆ. ಅವಸರದ ಬದುಕಿಗೆ ಅನಿವಾರ್ಯ ಎನಿಸುತ್ತೆ. ಪ್ರೀತಿ, ಸ್ನೇಹ ಒಂತರಾ ಒಂದು ನಾಣ್ಯದ ಎರಡು ಮುಖಗಳು. ಒಂದು ಇನ್ನೊಂದಾದರೆ, ಇನ್ನೊಂದು ಮೊದಲನೆಯದೆ ಆಗಿರುತ್ತೆ. ಆದರೆ ಪ್ರೀತಿಯ ಪರಾಕಾಷ್ಟೆ ಸ್ನೇಹವನ್ನು ಹಾಳು ಮಾಡಬಾರದು. ಪ್ರೀತಿ ಫಲಿಸದಿದ್ದಾಗ, ಸ್ನೇಹವನ್ನು ಮರೆಯುವುದರಲ್ಲಿ ಅರ್ಥವಿಲ್ಲ ಅನ್ನಿಸುತ್ತೆ. ಯಾವುದೇ ಒಂದು ಭಾವ ಬದುಕನ್ನು ಬಂಧಿಸಬೇಕು. ಆಗ ಹ್ರದಯಗಳು ಸ್ಪಂದಿಸಿದಂತಾಗುತ್ತೆ. ಹೊಸ ಕನಸುಗಳು ಮೊಳೆಯುತ್ತೆ. ಇದಕ್ಕೆ ಹೊರತಾಗಿ, ಹಲವು ದಿನವಿದ್ದ ಪ್ರೀತಿ ಮದುವೆಯಲ್ಲಿ ಪರ್ಯಾಪ್ತಗೊಳ್ಳದಿದ್ದಲ್ಲಿ, ಎಲ್ಲವನ್ನು ಮರೆತುಬಿಟ್ಟವರಂತೆ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ....ಎಂಬಂತೆ ಬದುಕುವುದರಲ್ಲಿ ಅರ್ಥ ಸಿಗಲಾರದು. ಪ್ರೀತಿಯ ಭಾವ ಅಮರವಾದದ್ದು. ಪ್ರೀತಿ, ಮೂಲವನ್ನು ನೆನಪಿಸಿಕೊಂಡಾಗ ಪ್ರತಿಬಾರಿ ಪ್ರತಿಫಲಿಸುವಂತದ್ದು. ಮನಸ್ಸಿನ ಯಾವುದೋ ಮೂಲೆಯಲ್ಲಿ ನಲಿದಾಡುವಂತದ್ದು. ಇದಕ್ಕೆ ಯಾವ ವಿಷಯದ ನಿರ್ಭಂದ ಸಿಗಲಾರದು. ಮಾತು ಮೌನವಾಗಿದ್ದಾಗಲೂ ಪ್ರೀತಿ ಮಾತನಾಡುತ್ತೆ, ಹ್ರದಯ ತವಕಿಸುತ್ತೆ, ಮನಸು ಅನುರಣಿಸುತ್ತೆ, ಕಣ್ಣು ಕಾತರಿಸುತ್ತೆ, ದೇಹ ಉಲ್ಲಸಿತವಾಗುತ್ತೆ. ಹೀಗೆ ಅವ್ಯಕ್ತ ಭಾವ ಅದೇನನ್ನೋ ಬದುಕಿಗೆ ಕೊಟ್ಟಂತೆ ಅನುಭವವಾಗುತ್ತೆ.


ಬದುಕಿನಲ್ಲಿ ಯಾವ ಅಂಶವನ್ನು ಕಳೆದುಕೊಳ್ಳುವಾಗಲೂ ಅದಕ್ಕೆ ಸಂದರ್ಭಗಳೇ ಮುಖ್ಯ ಕಾರಣವಾಗಿರುತ್ತೆ. ಆದರೆ ಯಾವ ಘಟನೆಗಳೂ ಸಂಬಂಧವನ್ನು ಸಂಪೂರ್ಣ ಕಡಿದುಹಾಕಬಾರದು. ಕೊನೇ ಪಕ್ಷ ಬಲುದೂರ ಚಲಿಸಿದ ಬದುಕಿನ ಮಾರ್ಗದ ಹೆಜ್ಜೆಗಳನ್ನು ಗುರುತಿಸುವಷ್ಟಾದರೂ ವ್ಯವದಾನ ಬೇಕು.ಆಗ ಬದುಕಿನ ನೆನಪುಗಳನ್ನೆ ಮರೆತು ಬಿಡುವವರಿಗಿಂತ ಹೆಚ್ಚು ಸಂತಸ ಸಿಕ್ಕಿರುತ್ತೆ. ಎಲ್ಲೋ ಅವ್ಯಕ್ತವಾಗಿರುತ್ತೆ ಅಷ್ಟೇ!. ಹೀಗೆ ಕಳೆಯಲಾಗದ ಎಷ್ಟೋ ಸಂಬಂಧಗಳು ಪರಿಸ್ಥಿತಿಯ ಅನಿವಾರ್ಯತೆಗೆ ಸಿಕ್ಕಿ ಕಳೆದುಕೊಳ್ಳುವ ಸಂದರ್ಭ ಬಂದಾಗ ಒಂದು ಮಾತು ಸ್ಪಷ್ಟ....ಭಾವನೆಗಳು ಸಾಯಲಾರವು. ಸಂಬಂಧಗಳು ಬಿರಿಯಲಾರವು. ಅದೇ ಆರಂಭ, ಅದೇ ಚಲನೆ, ಅದೇ ಪಾರದರ್ಶಕತೆ...ಆದರೆ ಜೊತೆಗೆ ಇನ್ನೊಂದು ಭಾವ.....ಹೊಸ ಭಾವದ ಮಿಳಿತದೊಂದಿಗೆ ಹಳೆಯ ಭಾವ ಮರೆಯುವುದಕ್ಕಿಂತ, ಅದರೊಂದಿಗೆ ಹಳೆಯ ಭಾವವನ್ನು ಸೇರಿಸಿ ಬದುಕನ್ನು ಸವಿಯುವುದರಲ್ಲಿ ಹೆಚ್ಚು ಅರ್ಥವಿದೆ ಅನ್ನಿಸುತ್ತೆ. ಹೀಗಾಗಿ something is........ಅಲ್ವಾ?


ನಿಮ್ಮ

ದಿನು


ಚಿತ್ರ ಕ್ರಪೆ:ಗೂಗಲ್

ಎಲ್ಲರ ಹುಡುಕಾಟವೂ ಒಂದೇ....?

ವಾಸ್ತವವಾಗಿ ಭೂತ ಕಳೆದದ್ದು, ಭವಿಷ್ಯ ಕಲ್ಪಿಸಲಾಗದ್ದು. ಆದರೂ.... ಕಣ್ಣೆದುರಿಗಿರುವ, ಕೈಯಿಂದ ಹಿಡಿದಿಡಬೇಕಾದ ವರ್ತಮಾನ ನುಣುಚಿಕೊಳ್ಳುವುದೇಕೆ? ಎಂಬ ಪ್ರಶ್ನೆಯ ಉತ್ತರಕ್ಕಾಗಿ ಪ್ರತಿ ದಿನವೂ ಹುಡುಕಾಟ ಸಾಮಾನ್ಯ ಅನ್ನಿಸುತ್ತೆ. ಇದೆ ಎಂದುಕೊಂಡಾಗಲೆಲ್ಲಾ ಇಲ್ಲವಾಗುವಂತದ್ದು, ಏನೂ ಇಲ್ಲವೆಂದುಕೊಂಡರೂ ಹೊಸ ಸವಾಲುಗಳು, ಬದಲಾವಣಿಗಳು ಮುತ್ತಿಕೊಳ್ಳುವಂತದ್ದು ಸಾಮಾನ್ಯ. ಆದರೆ ಎಲ್ಲರ ಹುಡುಕಾಟವೂ ಅದೇ...ನೆಮ್ಮದಿ, ಸಂತೋಷ!. ಬುದ್ಧ ಬೋದಿ ವ್ರಕ್ಷದ ಬಳಿಗೆ ತೆರಳಿದ್ದು, ಮಹಾವೀರ ಸಾಧನೆಗೈದದ್ದು ಎಲ್ಲವೂ ಬದುಕಿನ ಪರಿಪೂರ್ಣತೆಗಾಗಿ. ಅಲ್ಲೋ, ಇಲ್ಲೋ ಸಿಗುವ ಬದುಕಿನ ಅರ್ಥದ ಹುಡುಕಾಟಕ್ಕಾಗಿ!. ಯಾರು ಯಾವ ರೀತಿಯಲ್ಲಿ ಹುಡುಕಿದರೂ ಬದುಕು ಅವರವರ ನೇರಕ್ಕೆ ಮಾತ್ರ ಸಿಲುಕುವಂತದ್ದು. ಅನ್ಯರ ಬದುಕಿನ ಸವೆತ ಕೆಲವೊಮ್ಮೇ ಪ್ರೇರಣಿಯಾಗಬಲ್ಲುದೇ ಹೊರತು, ಬೇರೆಯವರು ಸವೆಸಿದ ಹಾದಿ ನಮ್ಮ ಬದುಕನ್ನು ನಿರ್ಮಿಸಲಾರದು.
ಪ್ರತಿ ಬಾರಿ ಅನುಭವದ ಮ್ರದು ಸ್ಪರ್ಶವನ್ನು ಕಂಡಾಗ ನೆನಪುಗಳನ್ನು ಬದುಕ ಸವಿಯಾಗಿ ಸ್ವೀಕರಿಸಬೇಕು. ಬದುಕನ್ನು ಸಮಾಜದ ನೇರಕ್ಕೆ ಕಂಡುಕೊಳ್ಳುವ ಯತ್ನ ನಮ್ಮಿಂದಾಗಬೇಕು. ಪ್ರತಿ ಬಾರಿ ಮುಂದಡಿ ಇಡುವಾಗ ಹಿಂದಿನ ಹೆಜ್ಜೆಯ ಪರಿಪೂರ್ಣಕ್ಕಾಗಿ ಸ್ರಮಿಸಿರಬೇಕು. ಯಶಸ್ವಿಯಾಗದಿದ್ದರೆ.....ನಿರಾಶೆ ಪಡಬಾರದು. ಇಷ್ಟೇ ತಾನೆ ಬದುಕು, ಆಶಯವೊಂದೇ ಯಶಸ್ಸಿನ ದಾರಿ ಎಂದರಿತು ಹಿಂತಿರುಗಿ ಇಟ್ಟಡಿಗೆ ಸ್ಪಷ್ಟೀಕರಣ ನೀಡುವ ಯತ್ನ ಮಾಡಬೇಕು. ಅಲ್ಲೂ ವಿಫಲಗೊಂಡರೆ ....ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದಡಿ ಪುಷ್ಟೀಕರಣ ಕಾಯಕ ಕೈಗೊಳ್ಳುವಂತವರಾಗಬೇಕು!. ಆಗ ಬದುಕಿನರ್ಥದ ಹುಡುಕಾಟಕ್ಕೆ ಅರ್ಥ ಸಿಗುತ್ತೆ ಅನ್ನಿಸುತ್ತೆ. ಎಲ್ಲದಕ್ಕೂ depend ಆಗುವಂತದ್ದು ಕೂಡ ಒಂದು ದೌರ್ಬಲ್ಯ. ಬದುಕಿನ ನಿರ್ಧಾರ ಮೂಡಬೇಕಾದದ್ದು ಪ್ರತಿ ಮನಸಿನಿಂದ. ಪರಿಸರ, ಹಿರಿಯರ ಹಾದಿ ಎಲ್ಲವೂ ಪೂರಕ ಅಂಶಗಳು. ಬದುಕಿನ ಪುಸ್ತಕದಲ್ಲಿ ಒಳ್ಳೆಯ ನಿರ್ಧಾರಗಳೇ ಮುನ್ನುಡಿಯಾಗಬೇಕು. ಪುಸ್ತಕ ತೆರೆದಾಗ ಇಡೀ ಪುಸ್ತಕದ ಉದ್ದೇಶ ಮುನ್ನುಡಿಯಿಂದಲೇ ಅರ್ಥವಾಗಬೇಕು. ಆಗ ಮಾತ್ರ ಓದಲು ಆಸಕ್ತಿ ಮೂಡೀತು....

ಕೆಲವೊಮ್ಮೆ ಭೂತದ ಘಟನೆಗಳೂ ಭವಿಷ್ಯವಾಗಿ ಬಿಡುವುದುಂಟು!..ಇದು ಆಶ್ಚರ್ಯವಲ್ಲ ..ಬದಲಿಗೆ ನಿರೀಕ್ಷೆ...!. ಎಷ್ಟೋ ಬಾರಿ ಕಳೆದ ಗಳಿಗೆಯ ನೆನಪಾದಾಗಲೆಲ್ಲಾ ಹಿಂದೆ ಓಡಬೇಕೆನಿಸುತ್ತೆ. ನಾವೇನೋ ಕಳೆದು ಬಂದಿದ್ದೇವೆ ಎಂದೆಣಿಸಿದಾಗಲೆಲ್ಲಾ ಮರಳಿ ಹಿಂದೆ ವ್ಯಾಪಿಸಬೇಕೆನಿಸುತ್ತೆ. ಆದರೆ ನಿರೀಕ್ಷೆಗಳ ಸಂಘರ್ಷದಲ್ಲಿ ಪ್ರತಿದಿನದ ಹುಡುಕಾಟ, ತೆರಳಬೇಕಾದ ದಾರಿ ಮಾತ್ರ. ಬದುಕಿನ ಉಚ್ಚ್ರಾಯ ಅಂಶಗಳೇನೆ ಇದ್ದರೂಹೊಸ ಕಲ್ಪನೆಗಳು ಗರಿಗೆದರಿದಾಗ ಹುಡುಕಾಟ ಇದ್ದದ್ದೇ. ಹಾಗಾಗಿಯೆ ನಾವು ಶಿಲಾಯುಗ ದಾಟಿ ಕಂಪ್ಯುಟರ್ ಯುಗಕ್ಕೆ ಕಾಲಿಟ್ಟದ್ದು. ಬದುಕಿನ ದಿನಗಳಲ್ಲಿ ಯಾರು ಸ್ರಷ್ಟಿಕರ್ತರಲ್ಲ. ಸ್ವಂತಿಕೆ ಸ್ವಲ್ಪ ಮಟ್ಟಿಗೆ ಇದ್ದರೂ ಮೂಲ ಪಡಿಯಚ್ಚು ಒಂದೇ......ಅದುವೆ ನೆರಳಿನಡಿ ಗುದ್ದಾಟ!!.ಎಷ್ಟೋ ಬಾರಿ ನಾನು ಹಎಯ ನೆನಪುಗಳನ್ನು ಚುಚ್ಚಿ ನೋಡಿದ್ದೇನೆ. ಎಲ್ಲರೂ ಹುಡುಕುವಾಗ ರುಚಿ ಕಂಡುಕೊಳ್ಳಲಾರದೇ ಅತ್ತಿದ್ದೇನೆ. ಬದುಕ ಚಿತ್ರಪಟ ಕೈಯಲ್ಲಿ ಹಿಡಿದು ಎಷ್ಟೋ ಬಾರಿ ಮೌನಿಯಾಗಿದ್ದೇನೆ. ಆದರೆ ಬದುಕಿನ ಯಾವ ಭಾವನೆಗಳೂ ಅದಕ್ಕೆ ಬೆನ್ನು ತಟ್ಟಲಿಲ್ಲ. ಬದುಕಿನ ಎಷೋ ಆದರ್ಶಗಳು ಅರ್ಥ ಕಂಡುಕೊಳ್ಳಲಾರವು ಎಂಬ ಕೊರಗು ಸಾಮಾನ್ಯ. ಈ ದಿಶೆಯ ಯೋಚನೆ ಮೂಡಿದಾಗಲೆಲ್ಲಾ ಭವಿಷ್ಯದ ಕನಸುಗಳನ್ನು ಅರಸುವಂತವರಾಗಬೇಕು. ವರ್ತಮಾನದ ವಾಸ್ತವವನ್ನು ನಿರೀಕ್ಷಿಸುವಂತವರಾಗಬೇಕು. ಒಟ್ಟಾರೇ ಎಲ್ಲರ ಹುಡುಕಾಟವೂ ವರ್ತಮಾನದ ಸಂತೋಷ, ನೆಮ್ಮದಿ ಮತ್ತು ಆ ಗಳಿಗೆಯ ಸತ್ಯ ಅನ್ನಿಸುತ್ತೆ ಅಲ್ವಾ?....
ನಿಮ್ಮ
ದಿನು

ಚಿತ್ರ ಕ್ರಪೆ: ಗೂಗಲ್