ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Friday, July 2, 2010

ಬದುಕೊಂದು ವ್ಯವಕಲನ!!!!!!!!!!




ಬದುಕಿನ ಯಾವುದೋ ಒಂದು ಅಸ್ಥಿರ ಹೆಜ್ಜೆಯಲ್ಲಿ ನಿಂತು, ಹಿಂದಿನ ಹೆಜ್ಜೆಯ ಪರಿಪೂರ್ಣತೆಗಾಗಿ ತವಕಿಸುವ ಪ್ರತಿಯೊಬ್ಬರಲ್ಲೂ ಯಾವುದೋ ಒಂದು ಅವ್ಯಕ್ತ ಅಂಶವನ್ನು ಕಳೆದುಕೊಂಡಿದ್ದೇವೆ ಎಂಬ ಭಯ. ಸತ್ಯದಲ್ಲಿಯೂ ಅಸತ್ಯದ ಅಸಹಾಯಕತೆ!. ಬಾಲ್ಯದಲ್ಲಿದ್ದ ಕುತೂಹಲ, ರಗೋರಿ ಆಟದ ನೆನಪು, ದುಂಬಿಯ ಬಾಲಕ್ಕೆ ನೂಲು ಕಟ್ಟಿ ಅದರ ಚಟುವಟಿಕೆ ನೋಡಿ ಹಿಂಸೆ ಕೊಡುತ್ತಿದ್ದೇನೆ ಅಂದುಕೊಂಡರೂ ನಲಿದಾಡುತ್ತಿದ್ದ ವಿಕ್ಷಿಪ್ತ ಮನ:ಸ್ಥಿತಿ, ಎಲ್ಲವೂ ಎಷ್ಟೋ ದೂರ ಸರಿದಿರುತ್ತದೆ. ಕೆಲವೊಮ್ಮೆ ಹುಡುಕಿದರೂ ಕೇವಲ ಕಲ್ಪನೆಗೆ ನಿಲುಕುವಷ್ಟು.....!. ಮಕ್ಕಳಿದ್ದಾಗ ನಾವೆಲ್ಲ ವಿಶ್ವಮಾನವರು. ದೊಡ್ಡವರಾದಂತೆ ವಿಶ್ವ ಮಾತ್ರ ನಮ್ಮದು!. ಚಿಕ್ಕಂದಿನಲ್ಲಿ ಯಾವ ವಿಷಯ ಮನಸಿಗೆ ಬಂದರೂ ಅದರ ಕುರಿತಾಗಿ ಯೋಚಿಸುವ ತವಕ. ಕಣ್ಣಿಗೆ ಕಂಡದ್ದನ್ನು ನೋಡಿ ವಿಶ್ಲೇಷಿಸುವ, ಇಲ್ಲದಿದ್ದ ಪಕ್ಷದಲ್ಲಿ ನೋಡಿ ಖುಷಿ ಪಡುತ್ತಿದ್ದ ದಿನಗಳು. ಆದರೆ ಜೀವನದ ಪ್ರತಿ ಹೆಜ್ಜೆ ಚಲನೆ ಕಂಡಾಗಲೂ ನಮ್ಮ ಬದುಕು constrained ಅನ್ನಿಸಿಬಿಡುತ್ತೆ. ಬೆಳಿಗ್ಗೆ ಹೊರಟರೆ ಸಾಯಂಕಾಲ ಮನೆಗೆ, ಎದ್ದ ತಕ್ಷಣ ಪ್ಯಾಂಟು, ಶರ್ಟ್, ಸೀರೆ, ಕುಪ್ಪಸ, ಚೂಡಿದಾರ, ಬೂಟಿಗೆ ಪಾಲಿಶ್....ಇದೇ ವ್ಯವಹಾರಿಕ ಯೋಚನೆಗಳು. ಮಗು ಹತ್ತಿರ ಬಂದರೆ, ಶಾಲೆಗೆ ಹೋಗಿ ಬಾ ಪುಟ್ಟ, ಸಂಜೆ ಆಡೋಣ ಎಂಬ ಆಶ್ವಾಸನೆ. ಮಗು ಹುಟ್ಟಿದ ದಿನದಿಂದಲೂ ಈ ಆಶ್ವಾಸನೆ ಇದ್ದದ್ದೆ!!. ಚಿಕ್ಕವರಿದ್ದಾಗ ಅಗಸ್ಟ್ ೧೫ರ ಧ್ವಜಾರೋಹಣ, ನವಂಬರ್ ೧೪ರ ಮಕ್ಕಳ ದಿನಾಚರಣಿ....ಹೀಗೆ ಎಲ್ಲವೂ ಖುಷಿ ಕೊಡುತ್ತಿತ್ತು. ದೊಡ್ಡವರಾದ ಮೇಲೆ ಈ ಬಗ್ಗೆ ಯೋಚಿಸುವಷ್ಟು ಸಹ ಕುತೂಹಲ, ಆಸಕ್ತಿ, ಪುರುಸೊತ್ತು ಯಾವುದೂ ಇಲ್ಲದಂತ ಪರಿಸ್ಥಿತಿ. ನಾವೇನನ್ನೋ ಮೀರಿ ಬಂದಿದ್ದೇವೆಂಬ ಭಾವ. ಒಂತರಾ ಪೂರ್ಣತೆಯಿಂದ ಅಪೂರ್ಣತೆಯತ್ತ ಪಯಣ..!. ಬದುಕಿನಲ್ಲಿ ಒಮ್ಮೆ ವ್ರದ್ದಾಪ್ಯ ಸಮೀಪಿಸಿದರೆ ಕಳೆದು ಬಂದ ದಿನಗಳಲ್ಲಿ, ಕಳೆದು ಕೊಂಡ ಎಷ್ಟೋ ಅಂಶಗಳು ನೆನಪಾಗುತ್ತೆ. ನದಿಯ ತೀರದಲ್ಲಿ ಕುಳಿತು ನದಿಯ ನೀರಿನ ಅಳತೆ ಮಾಡಿದಂತೆ, ಕೈಗೆ ಸಿಗದ, ಮನಕ್ಕೆ ನಿಲುಕದ ಸಾವಿರ ಯೋಚನೆಗಳು. ಹಿಂದೆ ತಾನು ಓಡಾಡಿದ ಮಾರ್ಗದ ದೂಳನ್ನು ಸಹ ಕೆಣಕದಷ್ಟು ದೌರ್ಬಲ್ಯ. ತನ್ನದೇ ಸ್ರಷ್ಟಿ ಮುನಿದರೆ ವಿಷ್ಯ ಮತ್ತಷ್ಟು ತೀವ್ರವಾಗುತ್ತೆ.

ಹೀಗೆ ಮಕ್ಕಳಿದ್ದಾಗ ಪ್ರಕ್ರತಿಯನ್ನು, ದೈನಂದಿನ ಬದಲಾವಣಿಗಳನ್ನು ಆಸ್ವಾದಿಸುತ್ತಿದ್ದ ವ್ಯವದಾನ, ದಿನ ಕಳೆದಂತೆ quite common ಅನ್ನಿಸಿಬಿಡುತ್ತೆ. ಆದರೆ ಬದುಕಿನ ಬದಲಾವಣಿಗಳ ಎಷ್ಟೋ ಅಂಶಗಳು ಹಳತು ಎನ್ನಿಸುತ್ತವೆಯಾದರೂ ಕೊನೆಗೆ ರುಚಿಯಾಗುವಂತದ್ದು ಪ್ರೀತಿ, ವಿಶ್ವಾಸ ಮಾತ್ರ. ಇದು ಹಣ್ಣಿಗಿಟ್ಟ ಹಲಸಿನ ಕಾಯಿಯ ಹಾಗೆ, ಹಣ್ಣಾಗ ಹೊರಟ ಹುಣಸೆ ಹುಳಿಯ ಹಾಗೆ. ಇದು ಎಷ್ಟು ರುಚಿಯಾಗಿರುತ್ತೆ ಅಂದರೆ, ಕೊನೆ ಗಳಿಗೆಯಲ್ಲಿ ಎಳೆದು ಧಮ್ ತೆಗೆದುಕೊಳ್ಳುವ ಮುಂಡು ಬೀಡಿಯ ಹಾಗೆ!. ಚಿಕ್ಕವರಿದ್ದಾಗ ಎಲ್ಲರೊಂದಿಗೆ ಬೆರೆತು, ಪಾಪು-ಪುಟ್ಟ ಅನ್ನಿಸಿಕೊಳ್ಳುತ್ತ, ಅಪ್ಪ, ಅಮ್ಮ, ಅಣ್ಣ, ಮಾವ, ತಂಗಿ, ಅಕ್ಕ, ಅಜ್ಜ, ಅಜ್ಜಿ ಎಲ್ಲರೊಂದಿಗೆ ಬೆರೆಯುವ ಅವಕಾಶವಿರುತ್ತೆ. ದಿನ ಕಳೆದಂತೆ ಎಲ್ಲವೂ ಸೀಮಿತ ಅರ್ಥ ಕಂಡುಕೊಳ್ಳುತ್ತೆ. ಯಾವಾಗಲೋ ಸಮಯ ಸಿಕ್ಕಾಗ ಮನೆ, ಮನೆಯವರೊಡನೆ ಸಂಭಾಷಣಿ. ಇಲ್ಲದಿದ್ದಲ್ಲಿ ಎಲ್ಲರೂ ಸೇರುವ ಸಂದರ್ಭ ಶುಭ ಸಮಾರಂಭದಲ್ಲಿ ಮಾತ್ರ. ಹೀಗೆ ದಿನಗಳುರುಳಿದಂತೆ ಬದುಕಿನ ವ್ಯವಕಲನ ತೀವ್ರವಾಗುತ್ತೆ. ಕಳೆದುಕೊಂಡ ಅಂಕೆಗಳು ಲೆಕ್ಕಕ್ಕೆ ಸಿಗದಷ್ಟು ದೂರ ಹೋಗಿರುತ್ತೆ. ನಮ್ಮವರು ಎಂದು ಕೊಂಡವರೆಲ್ಲಾ ಟೆಲಿಪೋನ್ ಮಿತ್ರರಾಗುತ್ತಾ ಹೋದಂತೆ, ಭಾವನಾತ್ಮಕ ಸಂಬಂದದ ತೀವ್ರತೆ ಕಮ್ಮಿಯಾಗುತ್ತೆ. ಆದರಿದುಅನಿವಾರ್ಯ. ಅವಸರದ ಓಟದ ಬದುಕಿನಲ್ಲಿ ತಂದೆ, ತಾಯಿಯವರ ಅನಾರೋಗ್ಯಕ್ಕೂ ಸ್ಪಂದಿಸದಷ್ಟು ಕೆಲಸ. ಬದುಕು ದಿನ ಕಳೆದಂತೆ ಸಂಘರ್ಷ ಪೋಣಿತವಾಗುತ್ತೆ. ಆಗ ಬದುಕಿನ ಭಾವನಾತ್ಮಕ ಮುಖಕ್ಕಿಂತ ಕಾರ್ಯೋನ್ಮುಖ ಮುಖ ಮುಖ್ಯವಾಗುತ್ತೆ. ಆದರೊಂದು ಮಾತು.......ಬದುಕು ಯಾವ ಸ್ಥರದತ್ತ ಓಡಿದರೂ ಅದು ಬದುಕಿನ ದಿನಗಳ ಉಳಿವಿಕೆಗಾಗಿ. ಅದು ಉಳಿಯಬೇಕೆಂದರೆ ಪರಿಸರದ ಬದಲಾವಣಿಗಳ ಜೊತೆ ಭಾವನಾತ್ಮಕ ಸ್ಪಂದನವಿರಬೇಕಾದದ್ದು ಅನಿವಾರ್ಯ. ಅದಿಲ್ಲದಿದ್ದರೆ ವ್ಯವಕಲನ ಬದುಕಿನ ಅರ್ಥವನ್ನೇ ಕಳೆಯುವುದರಲ್ಲಿ ಸಂಶಯವಿಲ್ಲ, ಅಲ್ವಾ?.......

ದಿನು
Note: Image from Internet