ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Saturday, April 3, 2010

ದೂರವಾಣಿಯ ದೂರದ ರಿಂಗಣದೊಂದಿಗೆ.........


ಆ ಒಂದು ಗಳಿಗೆ ಯಾವಾಗಲೋ ಹೇಳಬೇಕೆನಿಸಿದ್ದನ್ನು ಹೇಳಲು ಅವಕಾಶ ಮಾಡಿಕೊಡುತ್ತೆ. ಎಷ್ಟೋ ಬಾರಿ ದೂರದವರನ್ನು ಹತ್ತಿರವಾಗಿಸುತ್ತೆ. ಸಂಬಂಧಗಳನ್ನು ಸಂಧಿಸಿ ಬಿಡುತ್ತೆ. ಅದರ ಕೂಗಾಟ ದೂರದ ದ್ವನಿ ನಿನ್ನದೇ ಎನ್ನುವಂತೆ ಅಣಕಿಸುತ್ತೆ. ಬಚ್ಚಿಟ್ಟ ಭಾವನೆಗಳಿಗೆ ಚಿತ್ತಾರದ ಬಯಲನ್ನು ನೀಡಿ ವ್ಯ್ಯಾಪಿಸಿಕೊಳ್ಳಲು ಅನುವು ಮಾಡುತ್ತೆ. ಎಷ್ಟೋ ಬಾರಿ ದೂರವಾಣಿ ಜೀವ ಬಂದು ಮಾತನಾಡುತ್ತೆ ಅನ್ನಿಸುವಷ್ಟು ಅವ್ಯಕ್ತವಾಗುತ್ತೆ. ತೀರದ ಬಯಕೆಗಳು, ಮಾಸದ ನೆನಪುಗಳು, ದೂರಾದ ಭೇಟಿ, ಅನಿವಾರ್ಯತೆಯ ಅಂತರ....ಇವುಗಳನ್ನೆಲ್ಲವನ್ನು ಒಂದೇ ಕತ್ತರಿಯಡಿಯಲ್ಲಿ ಜೋಡಿಸಿ, ಇಗೋ ಮರೆಯದಿರು ಎನ್ನುವಂತೆ ಆಗಾಗ ಚೀರಾಟ ಮಾಡೋದನ್ನು ಕಂಡಾಗ ಓಡಿ ಹಿಡಿಯಬೇಕೆನಿಸುತ್ತೆ. ಕೈಯಲ್ಲಿ ಹಿಡಿ ನೆನಪನ್ನು ಹಿಡಿದಷ್ಟು ಅನುಭವ!!.

ಬದುಕಿನ ಬದಲಾವಣಿಗಳೇ ಹೀಗೆ. ಹತ್ತಿರವಿದ್ದಾಗ ಮಾತ್ರ ನೈಜತೆ. ಮತ್ತೆಲ್ಲವೂ ಅವ್ಯಕ್ತ. ಭಾವನೆಗಳನ್ನು, ಸಂಬಂಧಗಳನ್ನು ಯಕಶ್ಚಿತ್ ಒಂದು ಯಂತ್ರ ಹಿಡಿದಿಡುವ ರೀತಿ ಇದೆಯಲ್ವಾ, ಅದು ಎಲ್ಲರನ್ನು ಯಾವುದೋ ಪ್ರಶ್ನೆಯಡಿಯಲ್ಲಿ ನೂಕಿಬಿಡುತ್ತೆ. ಯಾವುದೋ ಒಂದೆಡೆ ಪುಸ್ತಕಗಳ ನಡುವೆ ಕುಳಿತಿದ್ದಾಗ, ಕೂಗಿ ಸಂಬಂಧಿಕರನ್ನು ಪರಿಚಯ ಮಾಡಿಕೊಡುವ ದೂರವಾಣಿಯನ್ನು ಕಂಡಾಗ ಯಾವುದೋ ಕಾಲದ ಸ್ನೇಹಿತ ಅನ್ನಿಸಿಬಿಡುತ್ತೆ. ಅನಿವಾರ್ಯತೆಯ ಸಂದರ್ಭದಲ್ಲಿ ಮನುಷ್ಯ ಅವಲಂಬನೆಯಾಗುವ ರೀತಿ ಒಂತರಾ ವಿಶೇಷ. ಅವಸರದ ಬದುಕಿನಲ್ಲಿ ಎಲ್ಲ ಸಂಬಂಧಗಳ ಬಗೆಗಿನ ವಿಚಾರಗಳನ್ನು ಮುಖಾಮುಖಿಯಾಗಿ ಚರ್ಚಿಸುವುದು ಕಷ್ಟಸಾದ್ಯ. ಆಗ ಸಂಬಂಧಗಳ ಕೊಂಡಿಯನ್ನು ಬೆಸೆಯುವಂತದ್ದು ಈ ಸ್ನೇಹಿತ. ಕೆಲವೊಮ್ಮೆ ನೆನಪುಗಳು ನಿರೀಕ್ಷೆಗಳಾಗಿ ಕಾಡುತ್ತಿರುವಾಗ, ಅವಸರದ ವಿಷಯದ ವಿಲೇವಾರಿಗೆ ಕಾಯುತ್ತಿದ್ದಾಗ, ಪ್ರೀತಿ ಹೆಪ್ಪುಗಟ್ಟಿ ಕಾದು ಕುಳಿತಿದ್ದಾಗ, ಸ್ನೇಹ ಸಾಕ್ಷಿಯಾಗಿ ಶುಭಾಶಯ ಮನದ ಮೂಲೆಯಲ್ಲಿ ಸರಿಯಲು ಅಣಿಯಾಗುತ್ತಿದ್ದಾಗ, ಯಾವುದೋ ಅಚಾನಕ್ ಸುದ್ದಿ ಆಶ್ಚರ್ಯಕ್ಕಾಗಿ ಕಾಯುತ್ತಿದ್ದಾಗ....ಮೊಳಗುವ ಆ ದ್ವನಿ ಎಷ್ಟೋ ಹ್ರದಯಗಳ ಬಡಿತವನ್ನು ಕಡಿಮೆ ಮಾಡಿಸುತ್ತೆ. ಕೆಲವೊಮ್ಮೆ ಹೆಚ್ಚಿಸಿ ಬಿಡುತ್ತೆ. ವ್ಯವಹಾರವನ್ನು ಸಲೀಸಾಗಿಸುತ್ತೆ. ಬಹುಶ: ಅವಸರದ ಬದುಕಿನ ಮನುಷ್ಯನ ಬಹುದೊಡ್ಡ ಒಡನಾಡಿ ಈ ದೂರವಾಣಿ!

ಕೆಲವೊಮ್ಮೆ ದೂರವಾಣಿ ಮುನಿಸಿಕೊಂಡ, ಅನಿವಾರ್ಯತೆಯ ಸುದ್ದಿ ತಿಳಿಯದೆ ಒದ್ದಾಡುವ ರೀತಿ ಇದೆಯಲ್ವಾ...ಆಗ ದೂರವಾಣಿಯ ರಿಂಗಣ ತುಂಬಾ ಹತ್ತಿರವಾದದ್ದು, ವ್ಯಾಪಕವಾದದ್ದು ಅನ್ನಿಸುತ್ತೆ. ಎಷ್ಟೋ ದೂರದ ಭಾವನೆಗಳನ್ನು, ಘಟನೆಗಳನ್ನು ಕುಳಿತಲ್ಲಿಗೆ ಕರೆದು ಹೇಳುವ Sincearity ಇದರದ್ದು. ಇದು best friend ಎಂಬ ಮನವರಿಕೆಯಿಂದಲೋ ಏನೋ...mobile phone ಅರಂಭವಾದದ್ದು!. ಈಗ ಈ ದನಿ ನಮ್ಮ ಬದುಕಿನ ಅಂಗವಾಗಿ ಬಿಟ್ಟಿದೆ. ಆದರೊಂದು ಜಿಜ್ನಾಸೆ.......ದೂರವಾಣಿ ಇರುವ ಮೊದಲು ಸಂಬಂಧಗಳು ಗಟ್ಟಿಯಾಗಿ ಇರಲಿಲ್ವಾ?..ಉತ್ತರ ಸುಲಭ. ಆಗ ಪ್ರಪಂಚ ನಮ್ಮ ಮನೆ, ನಮ್ಮ ಗ್ರಾಮ...ಅಷ್ಟಕ್ಕೆ ಸೀಮಿತವಾಗಿತ್ತು. ಆದರೀಗ ಅಣ್ಣ ಅಮೇರಿಕದಲ್ಲಿದ್ದರೆ, ತಮ್ಮ ಕುಂದಾಪುರದಲ್ಲಿ... ಅಗತ್ಯದ ವಿಷಯವನ್ನು ತಿಳಿಸಲು ಅಂಚೆಯನ್ನೇ ಅವಲಂಬಿಸುವುದಾದರೆ ಹಲವಾರು ದಿನ ಕಳೆದೀತು. ಆದರಿಂದು ಈ ಬಗೆಯ ಸಂದರ್ಭದಲ್ಲಿ ಆಪತ್ಕಾಲದ ಬಂಧುವಾಗಿ, ಭಾವನಾತ್ಮಕ ಕೊಂಡಿಯಾಗಿ, ವ್ಯವಹಾರಿಕ ಏಜೆಂಟ್ ಆಗಿ ದೂರವಾಣಿ ಕೆಲಸ ಮಾಡುತ್ತೆ. ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಇನ್ನೊಂದಕ್ಕೆ ಹೊಂದಿಕೊಳ್ಳೋದು, ಅವಲಂಬಿಸೋದು ಸ್ವಾಭಾವಿಕ ಅನ್ನಿಸುತ್ತೆ. ಸಂಘ ಜೀವಿ ಎನಿಸಿಕೊಂಡದ್ದು ಮನುಷ್ಯ ಸ್ವಾರ್ಥಕ್ಕಾಗಿ....!. ಅಲ್ಲೂ ಲಾಭವಿದೆ. ಇಲ್ಲದಿದ್ದಲ್ಲಿ ನಾವು ಕುರಿ, ಕತ್ತೆ, ಕೋಳಿಗಳಾಗಿ ಬದುಕುತ್ತಿದ್ದೆವೋ ಏನೋ.....ಆಗ ದೂರವಾಣಿಯ ರಿಂಗಣ ಪ್ರಾಂಗಣವನ್ನು ಮುಟ್ಟುತ್ತಿರಲಿಲ್ಲ, ಮನದ ಅಂಗಣವನ್ನು ತಟ್ಟುತ್ತಿರಲಿಲ್ಲ....ಅಲ್ವಾ?

ನಿಮ್ಮ
ದಿನು

2 comments:

ashwini said...

hmmmmm... !?!

ಪುಷ್ಪಲತ ದೀಕ್ಷಿತ್ said...

Exactly... Aa dOoravaniya ringaNakke usiru bigididu kAdhu kulithiruva anubhava vyaktapadisoke agode illa