ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Sunday, August 30, 2009

ನೆನಪುಗಳೆಲ್ಲವೂ ಸ್ವಂತದ್ದಲ್ಲ!!


ಎಷ್ಟು ಬಾರಿ ಯೋಚಿಸಿದ್ದೆವೊ ಗೊತ್ತಿಲ್ಲ....ಪ್ರತಿ ಬಾರಿ ಯೋಚಿಸಿದಾಗಲೂ ಮನದ ಮೂಲೆಯಲ್ಲೆಲ್ಲೊ ನೋವು, ಹತಾಶೆ, ಸಂತಸ. ಬದುಕ ಗೂಡಿನೊಳಗೆ ಅದೇನೋ ಚಿಲಿಪಿಲಿ. ಅಂದು ನಡೆದು ಹೋದ ಸತ್ಯ, ಎಲ್ಲೋ ನುಣುಚಿಕೊಂಡ ಬೀಸುದೊಣ್ಣಿ, ಪ್ರೀತಿಯ ಅಪ್ಪುಗೆಯಲ್ಲಿ ಬದುಕನ್ನು ನಿಮಿಷವೆಂದುಕೊಂಡಿದ್ದ ಗಳಿಗೆ, ಕಂಡು ಕಾಣದಿದ್ದ ಬಿಸಿ ಹಗಲ ಊಟ, ಬಣ್ಣದ ಬಲೂನಿನೊಂದಿಗೆ ಕಾರಂಜಿಯಾಗಿದ್ದ ಬಯಕೆ, ಅಮ್ಮನ ಸೆರಗಿನಿಂದ ಕದ್ದೋಡಿ ತಿಂದ ಬೆಲ್ಲದ ಕ್ಯಾಂಡಿ, ಅಪ್ಪ ಕೊಟ್ಟ ದುಡ್ಡನ್ನು ಚಾಚು ತಪ್ಪದೆ ತೆಗೆದಿಟ್ಟ ತೊಟ್ಟಿಲಾಟ........oopss...ಅದೆಷ್ಟು ನೆನಪುಗಳು...ಬರೆಯಲಾಗದಷ್ಟು...ಕೊನೆ ಕೊನೆಗೆ ನೆನಪಿಸಿ ಮುಗಿಯಲಾರದಷ್ಟು ನೆನಪುಗಳು!

ಅದ್ಯಾಕೊ ಒಂದು ಕ್ಷಣ.....ಎಲ್ಲ ಸತ್ಯಗಳು ನಮ್ಮದಲ್ಲ ಅನ್ನಿಸತೊಡಗುತ್ತೆ...ಸಮಯ ಸರಿದಂತೆ ನೆನಪುಗಳೆಲ್ಲವೂ ಸ್ವಂತದ್ದಲ್ಲ ಅನ್ನಿಸುತ್ತೆ!. ಅಂದೇ ಅಂದುಕೊಂಡಿದ್ದೆ..ತಪ್ಪಿಯೂ ಮತ್ತೆ ನೆನಪಿಸಿಕೊಳ್ಳಬಾರದೆಂದು. ಎಷ್ಟೋ ಬಾರಿ, ’ಯಾಕಿಷ್ಟು ಕಿರಿಕಿರಿ, ಮತ್ತ್ಯಾಕೆ ಕಾಡುತ್ತಿ?’ ಎಂದು ಬಾವನೆಗಳಿಗೆ ಬೈದಿದ್ದೆ. ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಮುಚ್ಚಿ ಎಲ್ಲೂ ನುಸುಳಬಾರದೆಂದುಕೊಂಡಿದ್ದೆ. ’ಯಾಕಪ್ಪಾ? ಅನ್ನೋದಾದ್ರೆ, ಅದು ನನ್ನ ಸ್ವಂತದ್ದಲ್ಲ ಸ್ವಾಮಿ’ ಅನ್ನಬೇಕಷ್ಟೆ. ನೀನಂದು ಆಡಿದ್ದ ಒಂದು ಮಾತು ನನ್ನ ಬದುಕಿನ ಕನಸುಗಳನ್ನು ಉಯ್ಯಾಲೆಯಾಗಿಸಿತ್ತು. ನಾನೇ ಕಟ್ಟಿಕೊಂಡಿದ್ದ ನನ್ನದೇ ಬದುಕ ಸೌಧಕ್ಕೆ ಫಿರಂಗಿಯಾಗಿತ್ತು. ಇಷ್ಟಿದ್ದೂ ನನ್ನದಲ್ಲದ ತಪ್ಪಿಗೆ ಬದುಕನ್ನು ಅಳಿಸಿದ ನೆನಪು ನನ್ನದಾಗುವುದಾದರೂ ಹೇಗೆ?. ನನಗಿಲ್ಲಿ ನೋವಿಡುವ ಈ ನೆನಪು, ನಿನಗಲ್ಲಿ ಸಂತೋಷ ಕೊಡುತ್ತದೆ ಎಂದಾದರೆ ಈ ನೆನಪು ಯಾರದ್ದು?. ನಿನ್ನ ಸ್ವಂತದ್ದೇ ಆದರೆ ಮತ್ತೆ ಮತ್ತೆ ಕಾಡುವ ಪರಿಯಾದರೂ ಏನು?

ಆ ಹೊತ್ತು ಹೇಳಿದ್ದ ನೆನಪು. ನಾನು ತಿಳಿದವನು, ಬದುಕನ್ನು ಅರ್ಥವಿಸಿಕೊಂಡವನು....so called sensual smart man. ಅದಕ್ಕಾಗೆ ನನ್ನ ಮಾತುಗಳನ್ನ ವೇದವಾಕ್ಯ ಅಂದುಕೊಳ್ಳುತ್ತಿದ್ದಿ. ಈಗೀಗ ಆ ವೇದಕ್ಕೇನಾಯಿತು?. ನೀನಂದುಕೊಡಿದ್ದ ನಿನ್ನದೇ ಮಾತುಗಳು ನಿನಗೀಗ ಸರಿ ಕಾಣಿಸದಿದ್ದಾಗ ಕಾಲ್ಕೆದರಿ ಎದುರು ನಿಲ್ಲುವ ನಿನ್ನ ವರ್ತನೆ ಸತ್ಯವೋ, ಸುಳ್ಳೋ...ಆ ಮಾತು ಒತ್ತಟ್ಟಿಗಿರಲಿ. ಆ ಗಳಿಗೆ ನಿನ್ನ ಮಾತು ನಿನಗೀಗ ಸರಿಯಿಲ್ಲ ಅನ್ನೋದಾದರೆ, ಆ ಗಳಿಗೆಯ ಬಾವನೆಗಳೇ ಸುಳ್ಳು ಎನ್ನೋದಾದರೆ ಈ ನನ್ನ ನೆನಪು ಮುಂದೆ ಸ್ವಂತದಾಗುವುದಾದರೂ ಹೇಗೆ?

ಎಲ್ಲವೂ ಹೀಗೆ ಕಣಿ...ನಮ್ಮದು ಎಂದಾದ ಎಲ್ಲ ಬಾವನೆಗಳಲ್ಲೂ ಸರಿ ಸಮನಾದ ಪಾಲು ಎಲ್ಲ ಸಮಯದಲ್ಲೂ ಇರದು. ಎಷ್ಟೋ ಬಾರಿ ನಾನಂದುಕೊಡಿದ್ದ ನನ್ನದೇ ಕಲ್ಪನೆಗಳು, ನೀನಂದುಕೊಂಡಿದ್ದ ನಿನ್ನದೇ ಕನಸುಗಳು, ಯಾರೋ ಹೇಳಿದಾಗ ಸರಿ ಎನಿಸಿದ ಎಷ್ಟೋ ಘಟನೆಗಳು....ಕೆಲವೊಂದು ನಿನ ಸ್ವಂತದ್ದು...ಇನ್ನಷ್ಟು ನನ್ನದು!. ನಾನು ಜೀವಿಸೀದೆ ಒಂತರಾ ಹೀಗೆ ಕಣಿ.....ನಿನ್ನದಾಗಿಹ ಘಟನೆಗಳನ್ನು ನನ್ನ ವ್ಯಾಪ್ತಿಯಲ್ಲಿಟ್ಟು, ನನಗೆ ಬೇಕಾದಷ್ಟು ಮಾತ್ರ ಸ್ವಿಕರಿಸಿದ್ದೇನೆ. ನೀನು ಕೂಡ ಅಷ್ಟೇ ಮಾಡು. ಇದನ್ನ ನನ್ನ ನಿರ್ಲಿಪ್ತತೆ, ನಾನು ಎಲ್ಲದನ್ನ ಹಂಚಿಕೊಳ್ಳದವ....ಅನ್ನೋದಾದರೆ ನಿನ್ನ ಸ್ವಂತದ ನೆನಪಿಗೆ ನಾನು ಮುನ್ನುಡಿಯಾಗಬೇಕಷ್ಟೆ. ಅದು ಬದುಕ ಈ ಹಂತದಲ್ಲಿ ನನಗೆ ತುಂಬಾನೆ ಕಷ್ಟ ಕಣಿ... ಒಂದು ಮುಂಜಾವಿನ ಸಮಯ, ಇನ್ನೊಂದು ತೆರೆದ ಹಗಲು ಅಥವಾ ಮುದುಡಿದ ತಂಗಾಳಿಯ ನಡುವೆ ನಿನ್ನಾವುದೋ ನೆನಪುಗಳನ್ನ ನೆನಪಿಸಿಕೊಳ್ಳದ ತಪ್ಪಿಗೆ,’ನೀನೆಷ್ಟು ಕ್ರೂರಿ, ಎಲ್ಲವನ್ನ ಹಂಚಿಕೊಂಡೆ ಇಲ್ಲ...’ ಎನ್ನುವ ನಿನ್ನ ಮಾತಿಗೆ ನನ್ನದೊಂದೇ ಉತ್ತರ ಕಣಿ...ಬದುಕಿನ ನನ್ನ ವ್ಯಾಪ್ತಿಯೆ ಬೇರೆ. ನಿನ್ನ ಎಷ್ಟೋ ನೆನಪುಗಳು ನನ್ನದಲ್ಲ. ಅಷ್ಟೇ ಯಾಕೆ...ನನ್ನ ಎಷ್ಟೋ ನೆನಪುಗಳು ನನ್ನ ಸ್ವಂತದ್ದಲ್ಲ!. ಈ ಉತ್ತರ ಕೇಳುವ ಹೊತ್ತಿಗೆ ...’ಹುಚ್ಚು ಹುಡುಗ...ಹೇಳಿದ್ದನ್ನ ಒಪ್ಪಿಕೊಳ್ಳೋದೆ ಇಲ್ಲ’ ಎಂದು ನೀನು ಗೊಣಗುತ್ತಿರುತ್ತಿ......ಆಗ ನಗುತ್ತಿಯೋ, ಅಳುತ್ತಿಯೋ...ಆ ನೆನಪು ಮಾತ್ರ ನಿನ್ನ ಸ್ವಂತದ್ದು :)

Imaginatory writing.........dinu

Friday, August 21, 2009

Haeundae beach visit...............

Recently had a chance to visit a lovely place in South korea......really awesome................true sense of nature beuty!. Haeundae beach is located in Busan metropolitan city, which is one of famous beach with around 12km coastline. As it was summer, people were packed like baloons with lot of color. By candour at one glance...I was totally surprized to see a big gathering.... whole korean population planned to stay like human tail in that narrow strip..!!!. Not surprisingly, I enjoyed each minute of my stay.....feel like people forgot everything by seeing nature !!. Apart from that, some how....by seeing that modern environment...I felt like...we are back to history?? or forgot everything while enjoying happyness?? or Is only enjoyment is culture....? .....still searching for answers...!! (you can see some moments here.....!










Wednesday, August 19, 2009

ಬರಿ ಬೋರು ಕಣೆ ಲೀನಾ...............................!!


[8 ವರ್ಷಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯ ’ಯುವ ವಿಜಯ’ ವಿಭಾಗದಲ್ಲಿ ಪ್ರಕಟಗೊಂಡಿದ್ದ ನನ್ನ ಬರಹ !]


‘ಹಲೋ ಬಾಲು, ಇಲ್ಲೇನ್ಮಾಡ್ತಿ?‘, ಕಾಲೇಜಿನ ಕಾರಿಡಾರಿನಲ್ಲಿ ತಲೆಕೆದರಿಕೊಳ್ಳುತ್ತ ಅದೇನೋ ಗೊತ್ತು ಗುರಿಯಿಲ್ಲದಂತೆ ನಿಂತಿದ್ದ ಬಾಲುವನ್ನು ಕೇಳಿದಾಗ,"ಏನಿಲ್ಲ ದಿನು, ಬರೀ ಬೋರು.....ಟೈಮ್ ಪಾಸ್ ಆಗೋದೆ ಇಲ್ಲ ಮರಾಯ‘ ಎಂದಾಗ ಯಾಕೆ ಕ್ಲಾಸಿರ್ಲಿಲ್ವ? ಎಂದೆ. ‘ಇಲ್ಲಪ್ಪ ಬರೀ ಬೋರು, language class, ಹಾಗಾಗಿ ಬಂಕ್ (absent) ಹಾಕಿದೆ, ಕ್ಲಾಸಲ್ಲೂ ಬೋರು, ಹೊರಗಡೆ ಬಂದ್ರೆ ಇಲ್ಲೂ ಬೋರು ಎಂದು ವಿಶ್ರಾಂತಿ ಕೊಠಡಿಯತ್ತ ತೆರಳಿದ ಬಾಲುವಿನ ತೊಂದರೆ ಅವನದೊಬ್ಬನದೇ ಅಲ್ಲ. ಸಹಸ್ರ ವಿದ್ಯಾರ್ಥಿಗಳ ಅರ್ಥವಿಲ್ಲದ ಗೋಳು. ಇದರ ಜೊತೆಗೆ ಇನ್ನು, ‘ಯಾಕೆ ಮಾತಾಡ್ತ ಕುಳಿತ್ಕೊಳ್ತ್ತಿರಿ?‘ ಎಂದು ಯಾರದ್ರೂ ವಿದ್ಯಾರ್ಥಿಗಳನ್ನು ಕೇಳಿದಾಗ ಬರುವ ಉತ್ತರ ಒಂದೇ.......Time pass ಮಾಡೋಕೆ. ಯಾಕೆ reading room ಇಲ್ವಾ ಎಂದಾಗ ಅಲ್ಲಿ time pass ಆಗೋದೆ ಇಲ್ಲ ಎನ್ನುವಾಗ ಅವರು ಊಟ ಮಾಡುವುದು, ಕಾರಿಡಾರಿನಲ್ಲಿ ಪಥಸಂಚಲನ ಮಾಡುವುದು, ಕೆಲವು ಹುಡುಗಿಯರ ಗೋಳು ಹೊಯ್ದುಕೊಳ್ಳುವಂತದ್ದು ಎಲ್ಲವೂ time pass ಗಾಗಿ. ಇದನ್ನೆಲ್ಲಾ ನೋಡುವಾಗ ಯಾಕಾದ್ರೂ ಆ ಬಗ್ಗೆ ಯುವ ಮನಸ್ಸು ಚಿಂತಿಸುತ್ತೆ ಅನ್ನೋದೆ ಒಗಟಾಗಿ ಉಳಿಯುತ್ತೆ. time ಅದರಷ್ಟಕ್ಕೆ ಚಲಿಸುತ್ತೆ.....ಆ 4th dimension (4D) ವಿಷಯದ ಬಗ್ಗೆ ಯುವ ಜನತೆ ಇಷ್ಟು ಕಾಳಜಿ ವಹಿಸಿ ಪ್ರಯೋಜನವಿಲ್ಲದ ಚಿಂತನೆ ನಡೆಸುತ್ತಾರೆ ಎನ್ನುವಂತದ್ದು ದೊಡ್ಡ ಪ್ರಶ್ನೆ!. ಈ ಚಿಕ್ಕ ಆದರೆ ಸೂಕ್ಷ್ಮ ಒಗಟನ್ನು ಬಿಡಿಸಹೊರಟಾಗ, time pass ಮಾಡುವ extra ಜವಾಬ್ದಾರಿ ಯುವ ಹೆಗಲಿಗೆ ಬೀಳಲು ಕೆಲವು ಕಾರಣಗಳನ್ನು ಗುರುತಿಸಬಹುದು.


ಮೊದಲನೆಯ ಮನ:ಶಾಸ್ತ್ರೀಯ ಅಂಶವೆಂದರೆ, ಸಮಯವನ್ನು ನಾವೇ ತಲೆ ಮೇಲೆ ಹೊತ್ತು ಮಾರಾಟಕ್ಕೆ ಇಟ್ಟುಕೊಂಡಂತೆ ಗ್ರಹಿಸಿಕೊಂಡಿರುವುದು. ಯಾವುದೇ ಒಂದು ವಿಷಯದಲ್ಲಿ ಪೂರ್ತಿ ತನ್ಮಯತೆಯಿಂದ ಕೂಡಿರುವವರಿಗೆ ಸಮಯದ ಉಳಿಕೆಯ ಬಗೆಗೆ ತಲೆ ಬಿಸಿ ಇರುತ್ತದೆಯೇ ಹೊರತು ಸಮಯದ ಕಳೆಯುವಿಕೆಯ ಬಗೆಗಲ್ಲ. ಮನಸ್ಸಿನಲ್ಲಿ ಬೇರಾವ ವಿಷಯವನ್ನು ಗ್ರಹಿಸದೆ ಕೇವಲ ಸಮಯ ಕಳೆಯುವುದಷ್ಟೇ ಉದ್ಯೋಗವಾದಾಗ ಈ pass ಮಾಡುವ loss job ಕೈಗೆ ಸಿಗುತ್ತೆ. ಇತರರಿಗಿದು ಅನ್ಯತ್ರ ಅಲಭ್ಯ !


ಸ್ಪಷ್ಟ ದಿನಚರಿಯಿಲ್ಲದ ಇಂದಿನ ಯುವ ಜನತೆಯ ಜೀವನ ವಿಧಾನ ಇನ್ನೊಂದು ಕಾರಣ. ಕೇವಲ time pass ಮಾಡುವುದಷ್ಟೇ ದಿನಚರಿ ಎಂಬ ಯೋಚನಾ ಮಟ್ಟ ಬೇರಾವುದಕ್ಕೂ ಆಸಕ್ತಿ ವಹಿಸದಂತೆ ಮನಸ್ಸನ್ನು ಹಿಡಿದಿಡುತ್ತದೆ. ಪ್ರತಿಯೊಬ್ಬರೂ ಒಂದು ದಿನ ಕಳೆದು ಹೋದಾಗ "ಅಬ್ಬ ನಿನ್ನೆ ಒಳ್ಳೆಯ time pass ಆಯ್ತು, ಆದ್ರೆ ಇವತ್ತು ಬರೀ ಬೋರು’ ಎನ್ನುತ್ತಾರೆಯೇ ಹೊರತು ಇರುವ ಬದುಕಿನ ಚಿಕ್ಕ ಅವದಿಯಲ್ಲಿ ಒಂದು ದಿನ ವ್ಯರ್ಥವಾಯಿತಲ್ಲ ಎನ್ನುವ ಕಲ್ಪನೆ ಮನಕ್ಕೆ ಬರದಿರುವುದು ಹಾಸ್ಯಾಸ್ಪದ; ಅಷ್ಟೇ ಗಂಭಿರವೂ ಹೌದು. ನಾವು pass ಮಾಡುವ ಪ್ರತಿಯೊಂದು ಕ್ಷಣವೂ ನಮ್ಮನ್ನು ಸಾವಿನ toss ನತ್ತ ಹತ್ತಿರ ಮಾಡುತ್ತೆ. ಒಟ್ಟು ಬದುಕಿನ ಸಮಯದ ಬಗೆಗೆ ಗಮನ ಹರಿಸಿದರೆ ಮನುಷ್ಯನ ಪ್ರಜ್ನಾವಂತ (ದೈಹಿಕ ಹಾಗೂ ಮಾನಸಿಕವಾಗಿ ಸದ್ರಡ ಸ್ಥಿತಿಯಲ್ಲಿರುವ ಬದುಕು) ಬದುಕು ಸರಿಸುಮಾರು 50 ವರ್ಷ ಮಾತ್ರ. ಕೆಲವೊಮ್ಮೇ ಇದಕ್ಕೆ ಅಪವಾದಗಳಿರಬಹುದು. ಬದುಕು ಹತ್ತರಿಂದ ಹದಿನೈದು ವರ್ಷಗಳವರೆಗೆ ಬಾಲ್ಯವನ್ನೇ ಒಳಗೊಂಡಿರುತ್ತೆ. ಬದುಕಿನಲ್ಲಿ ತನ್ನ ಸ್ವಂತಿಕೆಯ ಉದ್ಯೋಗವನ್ನು ಹುಡುಕಿಕೊಳ್ಳುವಾಗ ಇಪ್ಪತ್ತೈದು ಕಳೆದಿರುತ್ತೆ. ಉಳಿದಂತೆ ಮದುವೆ, ಮಕ್ಕಳು ಎನ್ನುತ್ತಾ ಅಳಿದುಳಿರಿವುದು ಕೇವಲ 20 ರಿಂದ 25 ವರ್ಷ ಮಾತ್ರ!. ಆದರೆ, ಬದುಕಿನಲ್ಲಿ ಸ್ವಂತಿಕೆಯ ಬಗೆಗೆ ದ್ರಡ ಯೋಚನೆ ಮಾಡಿ ಪ್ರಯತ್ನಿಸಬೇಕಾದ ಯೌವನದ ಅವದಿಯಲ್ಲಿ ಯಾವುದರ ಬಗೆಗೂ ಅಸಕ್ತಿ ತೋರದೆ ಯಾವಾಗ ನೋಡಿದರೂ ಬೋರು ಎಂದು ಗೊಣಗುವ ವ್ಯಕ್ತಿಗೆ ಇಡೀ ಬದುಕೇ ಬೋರಾಗಿ ನಿರ್ಮಾಣವಾಗಬಲ್ಲುದು!. ಬೋರಿನ ತೇರಿನಿಂದ ಹೊರಬಂದು ಯೋಚಿಸುವ ಹೊತ್ತಿನಲ್ಲಿ ತಲೆಯ ನಡುವೆಲ್ಲೋ ಬಿಳಿಕೂದಲು ಇಣುಕಿ ಅಣುಕಿಸಿರುತ್ತೆ!


ಉತ್ತಮ ವಿಷಯಗಳಲ್ಲಿ ಆಸಕ್ತಿಯ ಕೊರತೆ, ಸಮಯವನ್ನು ಕಳೆಯುವುದೇ ಗಂಭೀರ ಸಂಗತಿ ಎನ್ನಿಸಿಕೊಳ್ಳಲು ಕಾರಣ. ಕ್ಷಣಿಕತೆಯಲ್ಲೇ ಬದುಕನ್ನು ನಿರ್ಮಿಸುವ ಪ್ರಯತ್ನ. ಕಾಣದ ಗಳಿಗೆಯಲ್ಲಿ ಎಲ್ಲೋ ಬಚ್ಚಿಟ್ಟ ಕನಸುಗಳ ಮೇಲ್ಮೈಯನ್ನು ಮುಟ್ಟಿ ಒಳಹೋಗಲಾರದೆ ಬೋರು ಎಂಬ ಆರ್ತನಾದ!. ಕಾಲೇಜಿನ ಬದುಕು ಎಂದಾಗ ಜ್ನಾನ ಪಿಪಸುಗಳಾಗಬೇಕಿರುವ ಬದುಕು. ಪ್ರತಿಯೊಂದು ಕ್ಷಣವೂ ಹೊಸ ಯೊಜನೆಯ ಹುಟ್ಟನ್ನು ಆಹ್ವಾನಿಸಬೇಕು. ಹೊಸ ಕನಸುಗಳನ್ನು ಹೆಣಿಯಬೇಕು. ಅದರ ಹೊರತಾಗಿ ಯೌವನದಲ್ಲಿಯೇ ಮುದಿತನವನ್ನು ಕಂಡಂತೆ ಕೊರಗುವ ಜನರನ್ನು ಕಂಡಾಗ, ಪುಸ್ತಕಕ್ಕೂ ಇವರಿಗೂ ಏನೋ ವೈಷಮ್ಯವಿರಬೇಕು ಅನ್ನಿಸುತ್ತೆ. ಗ್ರಂಥಾಲಯದಲ್ಲಿ ಸಿಗಬಹುದಾದ ಹೆಚ್ಚಿನ ಮೌಲ್ಯದ, ಗುಣಮಟ್ಟದ ಪುಸ್ತಕಗಳನ್ನು, ಕೊನೇ ಪಕ್ಷ ತೆರೆದು ನೋಡುವ ಸೌಜನ್ಯವನ್ನಾದರೂ ಇಂದಿನ ಯುವ ಜನತೆ ರೂಡಿಸಿಕೊಳ್ಳಬೇಕು. ಈ ಹವ್ಯಾಸವನ್ನು ಬೆಳೆಸಿಕೊಂಡ ಬೆರಳೆಣಿಕೆಯಷ್ಟು ಜನತೆಯ ಬದುಕಿನ dictionary ಯಲ್ಲಿ ಬೋರು ಎಂಬ ಶಬ್ದ ಸಿಗದು. ಕೆಲಸವಿಲ್ಲದ ಬದುಕು ರಾಡಿ ತುಂಬಿದ ಚರಂಡಿಯಂತಿದ್ದರೆ, ಕೆಲಸದಲ್ಲಿ ತಲ್ಲೀನವಾಗಿರುವ ಮನಸ್ಸು ಪ್ರಪುಲ್ಲವಾಗಿರಬಲ್ಲುದು.


ಕೊನೆಯದಾಗಿ, ಯುವ ಜನತೆ ತಮ್ಮ ಬದುಕಿಗೆ ಬೇಕಾದ ಅಂಶಗಳನ್ನು ರೂಡಿಸಿಕೊಳ್ಳಲು ಹಿರಿಯ ಹೆಜ್ಜೆಗಳನ್ನು ಸ್ಪರ್ಶಿಸಬೇಕು. ಈ ಕುರಿತಾದ ನಿರ್ಲಕ್ಷ್ಯ ನಮ್ಮ ಬದುಕಿನ model ಗಳನ್ನ ಬದಲಾಯಿಸಬಲ್ಲುದು. ಇದರಿಂದಾಗಿ ಹಿರಿತನದ ಅನುಭವದ ಬಗೆಗಿನ ಕುತೂಹಲ, ತಿಳಿದುಕೊಳ್ಳಬೇಕೆಂಬ ಹಂಬಲ ಬದಿ ಸರಿದು, time pass ಆಗೋದೆ ಇಲ್ಲ ಎನ್ನುವ ಕಲ್ಪನೆ ಮೂಡುತ್ತಿದೆ. ಇಂದಿನ ಯುವ ಮನಸ್ಸಿಗೆ ಸ್ಟಿಫನ್ ಪ್ಲೇಮಿಂಗ್ (cricketer) ಬಗ್ಗೆ ಆಸಕ್ತಿಯಿದೆ, ಆದರೆ ಸ್ಟಿಫನ್ ಹಾಕಿಂಗ್ (world famous scientist, walking with wheel chair) ಯಾರೆಂದು ತಿಳಿಯದು!. ಹೀಗಾಗಿ ನಮ್ಮ ಆಸಕ್ತಿಯ ಆಳವನ್ನು ವಿಸ್ತರಿಸಬೇಕಾಗಿದೆ. ಹಿಂದಿನ ದಿನವಿಡಿ ಕುಳಿತು ಒಂದು ಬಾಲನ್ನು ಬಿಡದೆ ವೀಕ್ಷಿಸಿದ ಕ್ರಿಕೆಟ್ ಪಂದ್ಯದ ಬಗೆಗೆ ಮರುದಿನ ದಿನ ಪತ್ರಿಕೆಯಲ್ಲಿ ಪ್ರತಿ ಅಕ್ಷರ ಹುಡುಕುವ ಕಾಯಕ ಇಂದಿನ ಮಕ್ಕಳದ್ದು !. ಸೋತ ಕಪ್ತಾನನಿಗಿರಬೇಕಾದಷ್ಟು ಗಂಭೀರ ಯೋಚನೆಗಳು ಬೇರೆ !. ಆ ಗಳಿಗೆಯಲ್ಲಿ ತಮ್ಮ optional subject ನ ನೋಟ್ಸ್ ಬಾಕಿ ಇರುವ ವಿಷಯ ಗಮನಕ್ಕೆ ಬರದಿರುವುದು ವಿಪರ್ಯಾಸ. ಇನ್ನದರೂ ಆಳ ಉದ್ದೇಶಗಳತ್ತ ಮುಖ ಮಾಡೋಣ......ಆಗ ಬೋರು ಬಳಿ ಸುಳಿಯದು.


dinu :)

Monday, August 10, 2009

ನಾ ಕಂಡ ನನ್ನದೇ ಬದುಕು.......!








{7 ವರ್ಷಗಳ ಹಿಂದೆ ನನ್ನ ಬದುಕಿನ ಬಗೆಗೆ ನಾನೇ ಗೀಚಿದ ಬರಹ........... ತೊದಲೇ ಜಾಸ್ತಿ........... ಬದುಕು ಮತ್ತಷ್ಟು.....ಬರೆದಷ್ಟು.....ಮುಗಿಯದ್ದು....ಸಮಯ ಸಿಕ್ಕಾಗ ಇನ್ನಷ್ಟು ಬರೆಯುವ ನಿರಿಕ್ಷೆಯಲ್ಲಿ...................................}


ಇನ್ನೂ ಬದುಕ ದಾರಿಯನ್ನು ಪೂರ್ಣ ಸವೆಸಿಲ್ಲ. ಎಲ್ಲೋ ಅನುಭವದ ಮ್ರದು ಸ್ಪರ್ಶವನ್ನು ಕಂಡಿದ್ದೇನೆ. ಪ್ರತಿ ಸ್ಪರ್ಶ ಕಂಡಾಗಲು ನೆನಪನ್ನೇ ಬದುಕ ಸವಿಯಾಗಿ ಸ್ವೀಕರಿಸಿದ್ದೇನೆ. ಪ್ರತಿಬಾರಿ ಬದುಕನ್ನು ನನ್ನ ವಶಕ್ಕೆ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಪ್ರತಿಬಾರಿ ಮುಂದಡಿ ಇಡುವಾಗ ಹಿಂದಿನ ಹೆಜ್ಜೆಯ ಪರಿಪೂರ್ಣತ್ವವನ್ನು ಸಾಧಿಸಲು ಪ್ರಯತ್ನಿಸಿದ್ಧೇನೆ, ಯಶಸ್ವಿಯಾಗಿದ್ದೇನೆ. ಎಷ್ಟೋಬಾರಿ ವಿಫಲಗೊಂಡಿದ್ದೇನೆ. ಆದರೆ ನಿರಾಶೆ ಮೂಡಲಿಲ್ಲ. ಇಷ್ಟೇ ತಾನೇ ಬದುಕು ಆಶಯವೊಂದೇ ಯಶಸ್ಸಿನ ದಾರಿ ಎಂದರಿತು ಮತ್ತೆ ಹಿಂತಿರುಗಿ ಇಟ್ಟಡಿಗೆ ಸ್ಪಷೀಕರಣ ನೀಡುವ ಯತ್ನ ಮಾಡಿದ್ದೇನೆ. ಅಲ್ಲೂ ವಿಫಲಗೊಂಡಾಗ, ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದಡಿ ಪುಷ್ಟೀಕರಿಸುವ ಕಾಯಕ ಕೈಗೊಂಡಿದ್ದೇನೆ. ಸರಿ, ಇಷ್ಟೆಲ್ಲಾ ಮಾಡುವ ಮೊದಲು ನನ್ನ ಸವೆಸಿದ ಹಾದಿಯ ಕ್ಷೇತ್ರ ಪರಿಚಯ ಮಾಡದೆ ಬದುಕಿನ ಬಗೆಗಿನ ನನ್ನ ವ್ಯಾಖ್ಯಾನ ಕೇಳುಗರಿಗೆ ಓದುಗರಿಗೆ ತಿಳಿಯುವುದಾದರು ಹೇಗೆ?


ಅದೊಂದು ದಿನ ನನ್ನ ಊಹೆಯಲ್ಲಿರಲಿಲ್ಲ!. ನನ್ನ ತಂದೆತಾಯಿಯರಿಗೆ ಮಾತ್ರ ತಿಳಿದಿರಬಹುದು. ಅನೇಕ ಬಣ್ಣಗಳ ನಡುವೆ ಹೊಸ ಚುಕ್ಕಿಯ ಉದಯಕ್ಕಾಗಿ ಸ್ಮರಿಸುತ್ತಿರುವ ಪ್ರತಿಗಳಿಗೆಯು ನನ್ನ ಹುಟ್ಟಿಗೆ ಕಾರಣರಾದವರಿಗೆ ಮಾತ್ರಗೊತ್ತು!. ೧೯೮೨ರ ಜೂನ್ ತಿಂಗಳ ಶುಭ ಶುಕ್ರವಾರ. ಯಾವ ಕುಂದಿಲ್ಲದೆ, ಯಾವ ಮರೆಯಿಲ್ಲದೆ, ಬೆತ್ತಲೆಯಾಗಿ ಭೂಸ್ಪರ್ಷ, ನನ್ನ ಚರ್ಮ ಮೊದಲ ಬಾರಿ ಕಂಡದ್ದು. ಈಗ ಆ ಚರ್ಮ ಸವೆದು ಹೊಸ ಚರ್ಮ ಮುಊಡಿರಬಹುದು! ಆದರು ಆ ಸ್ಪರ್ಶ ನನ್ನನ್ನು ಚುಚ್ಚುತ್ತಿದೆ. ಕಾಲನ ಕಬಳಿಕೆ ನಿರಂತರವಾಗಿತ್ತು. ಚಿಕ್ಕ ಪುಟ್ಟ ಹೆಜ್ಜೆ ಇಡುವಷ್ಟರವರೆಗೆ ಬೆಳೆದೆ. ಅಷ್ಟೇನೂ ಶ್ರೀಮಂತರೂ ಅಲ್ಲದ, ಬದವರೂ ಅಲ್ಲದ ಮದ್ಯಮ ಕುಟುಂಬ. ತಾಯಿ ಮ್ರದುತಲ್ಪ. ತಂದೆಯ ಗಂಭೀರ ವ್ಯಕ್ತಿತ್ವ. ಅದನ್ನು ಬರಿಸಿಕೊಳ್ಳಲು ಈಗೀಗ ಕನ್ನಡಿ ಮುಂದೆ ನಿಂತು ಪ್ರಯತ್ನಿಸುತ್ತಿದ್ದೇನೆ!! ಎಲ್ಲದರಲ್ಲೂ ಹಿರಿತನದ ಪ್ರಭಾವ. ಶಾಂತ ಪರಿಸರ. ಸ್ವಲ್ಪ ಪ್ರಮಾಣದ ಬಡತನದ ಬೇಗೆ ಆಗಾಗ ಕುಟುಂಬವನ್ನು ಬಾದಿಸುತ್ತಿತ್ತು. ಎಸ್ಟೋ ಬಾರಿ ಅನ್ನ ಹುಡುಕಿದ ನೆನಪು ಕಣ್ಣನ್ನು ಕಟ್ಟುತ್ತಿದೆ. ಯಾಕೆಂದರೆ ಈಗ ಆಗ ಊಟ ಮಾಡಿದ್ದಕ್ಕಿಂತ ಹೆಚ್ಚು ಹಾಳು ಮಾಡುತ್ತಿದ್ದೇವೆ. ಕ್ರಷಿ ಪ್ರಧಾನ ಕುಟುಂಬ. ಇಬ್ಬರು ಅಣ್ಣಂದಿರ ಪ್ರೀತಿ ಅಕ್ಕನ ವಾತ್ಸಲ್ಯ. ಆವಾಗ ತುಂಬಾ ಗುಂಡಗಿದ್ದೆನಂತೆ. ಯಾರಿಗೆ ಗೊತ್ತು? ಭೂತದ ಘಟನೆಗಳೂ ಕೆಲವೊಮ್ಮೆ ಭವಿಷ್ಯವಾಗಿ ಬಿಡುವುದುಂಟು! ಇದು ಆಶ್ಚರ್ಯವಲ್ಲ. ನಿರೀಕ್ಷೆ? ಆ ಗಳಿಗೆ ಇನ್ನು ಬರಬೇಕಾದ್ದು ನನ್ನ ಮಕ್ಕಳ ಚಟುವಟಿಕೆ ನೋಡಿದ ಮೇಲೆಯೇ. ಅಲ್ಲಿಯವರೆಗೆ ಎಲ್ಲವೂ ಮರಳಿನಲ್ಲಿ ಮನೆ ಕಟ್ಟುವ ಪ್ರಯತ್ನ!. ಇದ್ದ ಗದ್ದೆಯನ್ನು ವ್ಯವಸಾಯ ಮಾಡಿ ಬದುಕುತಿದ್ದ ನಮ್ಮ ಬದುಕಿನಲ್ಲಿ ಚಿಕ್ಕಂದಿನಿಂದಲೇ ನನಗೆ ಸಿಕ್ಕ ಕೊಡುಗೆಗಳೆಂದರೆ, ಮರ‍್ಯಾದಸ್ಥ ಗುಣ, ನಿರ್ಬಿಡತೆ (Frankness) ಮತ್ತು ಬಾವನಾತ್ಮಕ ಸಂಬಂದ. ಈಗಲೂ ನಾನು ಬೆತ್ತಲೆಯಾಗಿ ಓಡಾಡಿದ, ಆಟವಾಡಿದ ಓಣಿ ನೆನಪಿದೆ; ಆದರೂ ಈವರೆಗೆ ನನಗೆ ಭೂತದ ಸ್ಥಿತಿಯಾಗಲು ಸಾದ್ಯವಾಗಲೇ ಇಲ್ಲ !!. ಎಷ್ಟೆಂದರೂ ಬಾಲ್ಯ ಮಾತ್ರ ಬಾಲ್ಯ ತಾನೇ?, ಏಗದು ಬರೀ ನೆನಪು. ಜ್ನಾನ ದೇಗುಲದ ಮೆಟ್ಟಿಲು ಸ್ಪರ್ಶಿಸುವ ದಿನ ಕೂಡ ಎದುರಾಯಿತು. ಕುಳ್ಳಗೆ ದಪ್ಪಗಿದ್ದ ನನಗೆ ಕೈಯನ್ನು ಮೇಲೆ ಚಾಚಿ ಕಿವಿಯ ಕೆಳ ಭಾಗದವರೆಗೆ ಬರುತ್ತದೆಯಾ ನೋಡು ಎಂದು ಹೇಳಿದ ನನ್ನ ಪ್ರೈಮರಿ ಮೇಷ್ಟ್ರ ಗಡಸು ಸ್ವರ ಹೆಪ್ಪುಗಟ್ಟಿ ನಿಂತಿದೆ. ಆಗಲೇ ನನ್ನ ಬದುಕಿನ ಪ್ರಥಮ Influence ಹೆಜ್ಜೆ ಅರಂಭವಾದದ್ದು. ಇದು ತಿಳಿದದ್ದು ಮಾತ್ರ ಬುದ್ದಿ ಸರಿಯಾಗಿ ಬಂದ ಮೇಲೆಯೇ !. ೨೫ ರೂ ಜಾಸ್ತಿ ಕೊಟ್ಟು ೧ ವರ್ಷ ಮೊದಲೇ ಶಾಲೆಯತ್ತ ದಾವಿಸಿದ್ದೆ. ಬದುಕಿನ ಉಚ್ಚ್ರಾಯದ ದಿನಗಳು ಬಹುಶ: ಅದೇ ಇರಬಹುದು. ಬೇಲಿರಹಿತ, ತಂತಿರಹಿತ, ಮಾರ್ಗರಹಿತ ಬದುಕದು. ಆದರೂ ಸ್ಪರ್ಶವಿದೆ !, ಅದನ್ನು ನಾನು ಅನುಭವಿಸಿರಲಿಲ್ಲ. ಎಷ್ಟೆಂದರೂ ನಾನು ಚಿಕ್ಕವ ತಾನೆ?

ದಿನದಿಂದ ದಿನಕ್ಕೆ ಎಲ್ಲದರಲ್ಲೂ ಬೆಳೆಯುತ್ತ ಸಾಗಿದೆ. ದೇವರ ದಯೆಯಿಂದ ಚಿಕ್ಕಂದಿನಿಂದಲೇ ಪ್ರೋತ್ಸಾಹ ನನ್ನ ಬೆನ್ನುಜ್ಜಿ ಏಳಿಸುತಿತ್ತು. ಏಗಲೂ ಕೂಡ !. ಭಾಷಣ, ಮಾತುಗಾರಿಕೆ ಚಿಕ್ಕಂದಿನಿಂದ ನನ್ನ ನಾಲಿಗೆಗೆ ಒಲಿದವು. ತಲೆಗೆ ವಿದ್ಯೆಯ ಸವಿಯು ಹಿಡಿಸಲಾರಂಭಿಸಿತು. ನಿರಾಳವಾಗಿ ಯಾವ ಅಡೆತಡೆಯಿಲ್ಲದೆ SSLC ವರೆಗೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದೆ. ನನ್ನ ಬದುಕಿನ ವಿದ್ಯೆಯ ಬೆಳವಣಿಗೆಯ ಗೆರೆ ಮೊದಲು ಹಿಂದೆ ಚಲಿಸಿದ್ದು ಪ್ರಥಮ PUC ಗೆ ಕಾಲಿಟ್ಟಾಗ !, ಆದರೂ ಅದನ್ನು ಪುನ: ಬದುಕಿನಲ್ಲಿ ಪಡೆದಿದ್ದೇನೆ ಎಂಬುದಂತೂ ಶತಾಂಶ ಸತ್ಯ. ನನ್ನಕ್ಕನಿಗೆ ಒಂದು ಕೊಡೆ, ಆದರೆ ಮರದ ಜಲ್ಲಿನ ಒಂದು ದೊಡ್ಡ ಕೊಡೆಯಡಿಯಲ್ಲಿ ಕೈ-ಮೈ ಹಿಡಿದುಕೊಂಡು ಮೂರು ಜನ (ತ್ರಿಮೂರ್ತಿಗಳು) ದಿನಾಲೂ ಶಾಲೆಗೆ ಹೋಗುತ್ತಿದ್ದುದು ಇನ್ನೂ ನೆನಪಿದೆ. ಆಗಲೇ ನನಗೆ ಸುಧಾರಿಸಿಕೊಳ್ಳುವ ಮನ:ಸ್ಥೈರ್ಯ ಬಳುವಳಿಯಾಗಿ ಬಂದಿತ್ತು. ನನ್ನ ಅಣ್ಣಂದಿರು ಕೂಡ ನನ್ನ ಬದುಕಿನ ಬಲು ದೊಡ್ಡ Model ಗಳು ಎಂದರೆ ತಪ್ಪಿಲ್ಲ. ಅವರಿಬ್ಬರು ಸಹ ಕಲಿಯುವಿಕೆಯಲ್ಲಿ ಎಲ್ಲರಿಗಿಂತ ಮುಂದೆ. ಬದುಕಿನ ಬಹು ದೊಡ್ಡ ಕಹಿ ಅನುಭವ ದೊರೆತದ್ದು 80 ಸರಾಸರಿ ಅಂಕ ಪಡೆದ ನನ್ನ ದೊಡ್ಡಣ್ಣ ಹೋಟೆಲ್ ಕೆಲಸಕ್ಕಾಗಿ ಹೊರ ಊರಿಗೆ ತೆರಳಿದ್ದು !, ಛೇ; ವರ್ತಮಾನ ಭೂತಕ್ಕಿಂತ ಎಷ್ಟು ಭಿನ್ನ ಎನಿಸುತ್ತಿದೆ. ಆಗಲೇ ಬದುಕಿನ ತೀವ್ರತೆ ಅರ್ಥವಾಗತೊಡಗಿದ್ದು. ಬದುಕಿನಲ್ಲಿ ಹೀಗೂ ಉಂಟಾ? ಎಂಬ ಪ್ರಶ್ನೆ ಮೂಡಿದ್ದು. ಚಿಕ್ಕಂದಿನಿಂದಲೇ ಎಲ್ಲಿ ಹೋದರೂ ಬಹುಮಾನ, ಸ್ಪರ್ದಾಪುರುಷೋತ್ತಮ award ಗಳು. ನನ್ನ ಅನಂದ ಆವಾಗ ಎಲ್ಲೆ ಮೀರಿತ್ತು. ಆದರೆ ಅದರ ಗಂಭಿರತ್ವ ನನಗೆ ಅರ್ಥವಾಗಿರಲಿಲ್ಲ. ನನಗೀಗಲೂ ಅ ಕೊರಗು ಹೋಗಿಲ್ಲ !. ಸಂಗೀತ ಕಲಿಯಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿತ್ತು, ಆದರೆ ವಿಧಿ ಲೀಲೆಯೇ ಬೇರೆ ಆಗಿತ್ತು. ಗಡಸು ಸ್ವರ, ಹಾಗಾಗಿ ಕನಸು ಕನಸಾಗೆ ಉಳಿದಿತ್ತು. ನನ್ನ ಬದುಕಿನ ಬಹುದೊಡ್ಡ ಅಂಶವೆಂದರೆ ನನ್ನ ಧನಾತ್ಮಕ ಮತ್ತು ರಣಾತ್ಮಕ ಅಂಶಗಳ ಬಗೆಗೆ ದಿನಾಲೂ ಪ್ರಶ್ನಿಸಿಕೊಳ್ಳುವಂತದ್ದು. ಎಂಟನೇ ತರಗತಿಯಿಂದಲೇ ಆ ನಿರ್ಧಾರಕ್ಕೆ ಬಂದಿದ್ದೆ. ಮೊದಲಿನಿಂದಲೂ ಭಾವನಾತ್ಮಕ ಜೀವಿ. ಬದುಕಿನ ಪ್ರತಿಸ್ತರದಲ್ಲೂ ಜೀವಿತ ಅಂಶ ಕಾಣಬಯಸುವವನು. ದನ ಕರುವನ್ನು ನೆಕ್ಕಿದಾಗ ಸಿಗುವ ಅವ್ಯಕ್ತ ಸಂತೋಷದಂತೆ , ಮೌನದಲ್ಲಿ ಮೊದಮೊದಲು ಸಂತೋಷ ಸಿಗುತಿತ್ತು. ಆದರೆ ಅದು ಮುರಿದದ್ದು ಹೈಸ್ಕೂಲಿನಲ್ಲಿ ನಡೆದ ಒಂದು ಘಟನೆಯಿಂದ. ಅದು ನನ್ನ ಬದುಕಿನ ದೊಡ್ಡ ಕಪ್ಪು ಚುಕ್ಕೆ !. ಹೇಗೋ ಅದರಿಂದ ಹೊರಬರುವ ಯತ್ನ ಮಾಡಿ ಯಶಸ್ವಿಯಾದೆ. ಅದರ ಫಲವೇ ನಾನು ಕುಂದಾಪುರ ಬಿಟ್ಟು PUC ವ್ಯಾಸಂಗಕ್ಕಾಗಿ ಉಜಿರೆ SDM ಕಾಲೇಜಿಗೆ ತೆರಳಿದ್ದು. SSLC ಮುಗಿದ ನಂತರ ಪ್ರತಿ ದಿನವೂ ಸಯಂಕಾಲ ಮಲಗುವ ಮೊದಲು ಕೋಣಿಯ ಚಿಲಕ ಹಾಕಿ 10 ನಿಮಿಷ ದಿನದ ಬಾವುಕಗಳಿಗೆ ನೆನೆದು ಅಳುತ್ತೇನೆ, ಈಗಲೂ ಕೂಡ !. ಅದೀಗ ನನ್ನ ದಿನಚರಿಯಾಗಿ ಬಿಟ್ಟಿದೆ !. ನನ್ನ ಬದುಕಿನಲ್ಲಿ ನಾ ಕಂಡ ಸತ್ಯವೆಂದರೆ, ಬದುಕಿನಲ್ಲಿ ಯಾವುದನ್ನು ಬೇಕು, ಆಗಬೇಕು ಎಂದೆಣಿಸಿದ್ದೆನೋ ಅದರಲ್ಲಿ ಒಂದೂ ಆಗಲಿಲ್ಲ. ಹಾಗಾಗಿ ಈಗೀಗ ಅ ಬಗ್ಗೆ ಯೋಚಿಸುವ ಗೋಜಿಗೆ ಹೋಗುವುದನ್ನು ಬಿಟ್ಟಿದ್ದೇನೆ. ಈಗ ನನ್ನ ನಿರ್ಧಾರ ಸ್ಪಷ್ಟ. ಕಾಲನನ್ನು ನಮ್ಮ ದಿನಚರಿಗೆ ನಿಯಂತ್ರಿಸುವ ಯತ್ನ ಬಿಟ್ಟು, ನಮ್ಮ ನಿರ್ಧಾರಗಳಿಗೆ ಒಲಿಸಿಕೊಳ್ಳುವ ಕಾರ್ಯ ಬಿಟ್ಟು, ಕಾಲದೊಂದಿಗೆ ಸವೆಸುವ ದಾರಿ ಕಂಡುಕೊಳ್ಳುವತ್ತ ಸಾಗಿದ್ದೇನೆ. ಆದರೆ ಯಶಸ್ವಿಯಾಗಿದ್ದೇನೆ ಎನ್ನಲಾರೆ. ಎಷ್ಟೆಂದರೂ ಬಾಲ್ಯದ ಗುಣವನ್ನು ಪೂರ್ಣ ತೊರೆಯಲಾದೀತೆ?.

ಛೇ, ನಾನು ಬದುಕಿನಲ್ಲಿ ಬಂದೊದಗಿದ ಎಷ್ಟೆಷ್ಟೋ ವಿಪುಲ ಅವಕಾಶಗಳನ್ನು ಕೈಚೆಲ್ಲಿ ಕುಳಿತಿದ್ದೆ. ಅದರಲ್ಲೂ ನಾ ಕೈಗೊಂಡ ನಿರ್ಧಾರಗಳಲ್ಲಿ ಆಶ್ಚರ್ಯವಾಗಬಹುದಾದ ನಿರ್ಧಾರವೆಂದರೆ, ದ್ವಿತೀಯ PUC ಆದ ನಂತರ ವ್ರತ್ತಿಪರ ಶಿಕ್ಷಣವನ್ನು ತಿರಸ್ಕರಿಸಿದ್ದು !. ಅಂಕಗಳಿಗೇನು ಕೊರತೆಯಿರಲಿಲ್ಲ. CET rank ಕೂಡ ಉಜ್ವಲ ದಾರಿ ಒದಗಿಸಿತ್ತು. ಯಾರೂ ನಂಬಲಾರದ ಸತ್ಯವೆಂದರೆ ಯಾವ ಕೋಚಿಂಗಿಗೂ ಹೋಗದೆ CET ಯಲ್ಲಿ 621 ನೇ rank ಬಂದಿತ್ತು. ನಂಬಲಸದಳ ಕೂಡ !. ಆದರೆ ದಿಟ್ಟ ಕ್ರಮ ಕೈಗೊಂಡು ಈಗಲೂ ನನ್ನ ಸಂಬಂಧಿಕರ ಛೀ, ತೂ ಎಂಬ ಮಾತುಗಳಿಗೆ ಬದುಕಿನಲ್ಲಿ ವೇದಿಕೆ ನಿರ್ಮಿಸಿಕೊಂಡೆ.


ಇದು ಚಿಕ್ಕ ಬದುಕಿನ ಚೊಕ್ಕ ಚಿತ್ರಣ. ಆದರೂ ಎಷ್ಟೋ ಬಾರಿ ಹಳೆಯ ನೆನಪುಗಳನ್ನು ಚುಚ್ಚಿ ಚುಚ್ಚಿ ನೋಡಿದ್ದೇನೆ. ರುಚಿ ಕಂಡುಕೊಳ್ಳಲಾಗದೆ ಅತ್ತಿದ್ದೇನೆ. ಬದುಕ ಚಿತ್ರಪಟ ಕೈಯಲ್ಲಿ ಹಿಡಿದು ಎಷ್ಟೋ ಬಾರಿ ಮೌನಿಯಾಗಿದ್ದೇನೆ. ಹುಚ್ಚನಂತೆ ವರ್ತಿಸಿದ್ದೇನೆ. ಆದರೆ ನನ್ನ್ಯಾವ ಬಾವನೆಗಳೂ ಅದಕ್ಕೆ ಬೆನ್ನು ತಟ್ಟಲಿಲ್ಲ. ರಾತ್ರಿ ಅದಕ್ಕಾಗಿ ಅತ್ತಿದ್ದೇನೆ. ಬದುಕಿನ ಎಷ್ಟೋ ಆದರ್ಶಗಳು ಅರ್ಥಕಂಡುಕೊಳ್ಳಲಾರವು ಎಂಬ ಕೊರಗು ಇನ್ನೂ ಇದೆ. ಈ ದಿಶೆಯ ಯೋಚನೆ ಹರಿದಾಗ ಸಾಹಿತ್ಯ ನನಗೆ ಸಾಂತ್ವನ ನೀಡಿತು. ಅದರತ್ತ ವಾಲಿದೆ. ಸ್ವಲ್ಪ ಪ್ರಮಾಣದಲ್ಲಿ ಪೆನ್ನಿನ ಮೊನೆಗೆ ಕಸರತ್ತು ಕೊಡುವ ಯತ್ನ ಮಾಡಿದೆ. ಅದರ ಫಲವೇ ರಾಜ್ಯ ಮಟ್ಟದ ಕವನಗಳ ಸಂಗ್ರಹ ‘ಅನ್ವೇಷಣಿ‘ ಪುಸ್ತಕದಲ್ಲಿ ನನ್ನ ಕವನವೂ ಒಂದಾಗಿ ಪ್ರಕಟಗೊಂಡಿತು. ಜನವಾಹಿನಿಯ ‘ದ್ರಷ್ಟಿಕೋನ‘ದಲ್ಲಿ ಹಲವಾರು ಲೇಖನಗಳು ಪ್ರಕಟಗೊಂಡವು. ಬಹುಮಾನಗಳು ಕೈ ಸ್ಪರ್ಶಿಸಿದವು. ತರಂಗ, ಉದಯವಾಣಿ ಮುಂತಾದ ಪತ್ರಿಕೆಗಳು ಮನದ ಸ್ಪಂದನಗಳಿಗೆ ವೇದಿಕೆಯಾದವು. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹಗಳು ಬದುಕನ್ನು ಪ್ರೀತಿಸುವ ದಾರಿ ತೋರಿದವು. ಎಷ್ಟೋ ಮಧುರ ಬಾಂದವ್ಯಗಳನ್ನು ಕೂಡಿ ಹೊಸೆದವು. ರಾಜ್ಯ ಮಟ್ಟದಲ್ಲೂ ಕತೆ ಆಯ್ಕೆಯಾಗುವವರೆಗೆ ಪ್ರಯತ್ನ ಯಶಸ್ವಿಯಾಯಿತು. ಹೆಜ್ಜೆ ಇನ್ನೂ ಮುಂದೆ ಸಾಗುವುದರಲ್ಲಿದೆ............................................

ಹ್ಲೂ, ಬಯಸಿದ್ದು ವಿಜ್ನಾನ, ಅನುಭವಿಸುತ್ತಿರುವುದು ಸಾಹಿತ್ಯ, ದಿನಚರಿ ಹರಟೆ, ಸಂಬಂಧ ಭಾವನಾತ್ಮಕ....ಹೀಗೆ ಹಲವು ಮುಖಗಳ ಬದುಕು ನನಗೆ ಖುಷಿ ಕೊಡಲಾರಂಭಿಸಿತು. ಆದರೆ ಒಂದೇ ಮುಖವನ್ನು ನೋಡಿದ ಕೆಲವರಿಗೆ ನನ್ನನ್ನು ಕಂಡಾಗ ಮೈಮೇಲೆ ಕೆಂಡ ಸುರಿವಂತಾಗುವುದುಂಟು. ದೇವರು ಅವರನ್ನು ತುಪ್ಪದಲ್ಲೇ ಇಟ್ಟಿರಲಿ !. ಹೀಗೆ ಬದುಕಿನ ಬಗೆಗೆ ನಿಡಿದಾದ ನಿಟ್ಟುಸಿರನ್ನು ಕೈಯಲ್ಲಿ ಹಿಡಿದು ಮುಂದೆ ಸಾಗುತ್ತಿದ್ದೇನೆ. ಆ ದಾರಿಯಲ್ಲಿ, ‘ಹುಡುಕುತ್ತಿದ್ದೇನೆ, ಭೂತದ ನೆನಪುಗಳನ್ನು; ಅರಸುತ್ತಿದ್ದೇನೆ ಭವಿಷ್ಯದ ಕನಸುಗಳನ್ನು; ನಿರೀಕ್ಷಿಸುತ್ತಿದ್ದೇನೆ ವರ್ತಮಾನದ ವಾಸ್ತವವನ್ನು; ಸ್ವೀಕರಿಸುತ್ತಿದ್ದೇನೆ ಕೈಯೆದುರೇ ನುಸುಳಿಕೊಳ್ಳುವ ಗಳಿಗೆಯನ್ನು‘..........................ಆದರೂ ಎಷ್ಟೋ ಬಾರಿ ಭೂತ ಕಳೆದದ್ದು, ಭವಿಷ್ಯ ಕಲ್ಪಿಸಲಾಗದ್ದು....ಇಷ್ಟಿದ್ದೂ ವರ್ತಮಾನ ಕೈಯಿಂದ ನುಸುಳಿಕೊಳ್ಳುವುದೇಕೆ? ಎಂಬ ಪ್ರಶ್ನೆಯನ್ನು ಮುಂದೊಡ್ಡಿ ಮುಂದೆ ಸಾಗುತ್ತಿರುವ........

ನಿಮ್ಮ ದಿನು

ನೊಂದ ಮನಸಿಗೆ .................



ನೀನು.........
ತಿಳಿನೀರ ಬುಗ್ಗೆ, ನೋವಿನಾಕಾಶದಲಿ
ಬಲಿತ ಕನಸು, ಬದುಕ ಗಂಭೀರತೆಯಲಿ
ನೋವಿನಾಟದಲಿ, ಕಪ್ಪುಗೋಡೆ
ನಂಬಿಕೆಯ ಪರಿಯಲ್ಲಿ ಪುಟ್ಟಮಗು
ಪ್ರೀತಿಯಾಳದಲಿ ಶರಧಿ
ಗೌರವದ ಆಭರಣ ನಿನ್ನ ಮೈತುಂಬ



ನಾನು.............
ತೇಲಿಹೋಗುವ ಮೋಡ
ಮೊಳಕೆಯೊಡೆವ ಬೀಜ
ಅನಂತ ಶಾಖದ ಸೂರ್ಯ
ಬಣ್ಣದೊಳಗಿನ ಆಕಾಶ
ಬಯಲಾಗದ ಪರಿಯ ರಕ್ಷಕ


ಆದರೂ.....
ಮರೆತಿಲ್ಲ ಗೆಳತಿ ಬದುಕಿನರ್ಥ
ಮರೆತಿಲ್ಲ ಗೆಳತಿ ನೋವಿನಾಳ
ಮರೆತಂತೆ ಮರೆವ
ಅರಿತಂತೆ ಬೆರೆವ
ಈ ಮನಸು.....
ಕರಗುವ ಮಂಜು...
ನಿನ್ನದೆನ್ನುವ ಬದುಕ ಪುಟದಲಿ
ನನ್ನದೇ ಮುನ್ನುಡಿ
ಬರಹ ಕೂಡ ನನ್ನದೇ
ಹೆಸರು ಮಾತ್ರ ನಿನ್ನದು......

ನಿನ್ನ, ದಿನು

Wednesday, August 5, 2009

Beutiful experience of life........ snowfall during winter season in South Korea...Njoying from 3 years!!!......white rain from sky......around -20 degree temperature...totally chilled, still warm experience of heart......all I can say.......nature is utter ultimate..........everything is rest...!