ಕಳೆದ ವರ್ಷ ಆಚರಿಸಿದ ಗಣೀಶ ಚತುರ್ಥಿ, ಮೊನ್ನೆ ಮೊನ್ನೆ ಆಚರಿಸಿದ ಮಂಗಳವಾರದ ಸಂಕಷ್ಟಿ ವ್ರತ, ಪ್ರತಿ ದಿನವೂ ಮುಖ ನೋಡಿ ಸಂತಸ ಪಡುತ್ತಿದ್ದ ಭಾವ, Blue oceanನಲ್ಲಿ ತೆಗೆದ ಪ್ಯಾಂಟು, ಪಾರಿಜಾತದಲ್ಲಿ ತಿಂದ ಸ್ವೀಟು, ಗೀತಾಂಜಲಿಯಲ್ಲಿ ಕಂಡ ಚಲನಚಿತ್ರ, ಮರವಂತೆಯಲ್ಲಿ ಕುಣಿದಾಡಿದ ಸಮುದ್ರ ತೀರ, ಸೋಮೇಶ್ವರದಲ್ಲಿ ಮೌನ ಸಂತಸ ಅನುಭವಿಸಿದ ಪರಿಸರ, ರೈಲಿನ ಚುಕುಬುಕು ಸದ್ದಿನೊಂದಿಗೆ ಸಂತಸದ ಅಲೆಯನ್ನು ತೇಲಿಬಿಟ್ಟ ಪ್ರವಾಸ, ಮೊನ್ನೆಯವರೆಗೂ ಇಷ್ಟವಾಗುತ್ತಿದ್ದ ಚಾಕಲೇಟುಗಳು, ಬೇಡವೆಂದರೂ ಇಷ್ಟವಾಗುವ ಕನಸುಗಳು, ಪದೇ ಪದೇ ಕೈತಟ್ಟಿ ಬದುಕನ್ನು ಸಂತಸದ ಬುಗ್ಗೆಯಾಗಿಸುವ ನೆನಪುಗಳು......ಹೀಗೆ ಆ ಗಳಿಗೆಯಲ್ಲಿ ಮನಸ್ಸಿಗೆ ಇಷ್ಟವಾದದ್ದು, ಮರುಗಳಿಗೆಯಲ್ಲಿ ಅವ್ಯಕ್ತ ಅನ್ನಿಸುತ್ತೆ. ಯಾವ ಮಾಪನದಿಂದಲೂ ಅಳೆಯಲಾಗದಷ್ಟು ವೇಗದ ಯೋಚನೆಗಳು. ಈಗ ಕುಂದಾಪುರವಾದರೆ ಮರುಕ್ಷಣ ಮನಸ್ಸು ಅಮೇರಿಕಾದಲ್ಲಿರುತ್ತೆ. ಯಾವ ನಿರ್ಭಂದವೂ ಇಲ್ಲದ, ಸಲೀಸಾಗಿ ತಿರುಗಾಡಬಲ್ಲ ಚಲನಶೀಲ ವಸ್ತುವೆಂದರೆ ಬಹುಶ: ಇದೇ ಇರಬೇಕು. ಯಾವ ಸ್ಥಿರ ಯೋಚನೆಯೂ ಮನುಷ್ಯನ ಮನಸ್ಸಿನಲ್ಲಿ ಶತಾಂಶ ಹಿಡಿದಿಡಲು ಅಸಾದ್ಯ ಅನ್ನಿಸುತ್ತೆ. ಯಾಕೆ ಹೀಗೆ ಬದಲಾವಣಿಯ ಬಿಸಿ ಮನಸ್ಸನ್ನು ತಟ್ಟುತ್ತೆ ಎನ್ನುವುದೇ ಪ್ರತಿದಿನದ ಪ್ರಶ್ನೆಯಾಗಿರುತ್ತೆ. ಬದಲಾವಣಿಗಳೇ ಇಲ್ಲದ ಸ್ಥಿರ ಮನಸ್ಸು ಬದುಕಿಗೆ ಜಡತ್ವ ಕೊಟ್ಟಿರುತ್ತೆ!.
ಅನಿವಾರ್ಯವಾದಾಗ ಮಾತ್ರ ಮನಸ್ಸನ್ನು ಅನ್ಯ ವಿಚಾರದ ಕಡೆಗೆ ಸರಿಸಬೇಕು. ಕೆಲವೊಮ್ಮೆ ನೋವುಗಳು, ನಿರಾಶೆಗಳು, ನೆನಪುಗಳು, ಕನಸುಗಳು ಬೇಡವೆಂದರೂ ಮನದ ಬಯಲನ್ನು ಅಪ್ಪಿಕೊಳ್ಳುತ್ತೆ. ಇನ್ನು ಕೆಲವು ಬಾರಿ ಮನಸ್ಸಿನ ಸ್ಥಿರ ಭಾವ ಬದುಕಿಗೆ ಅರ್ಥ ಕೊಡುತ್ತೆ. ಕಾಣದ ಬಯಕೆಗಳು ಮನಸ್ಸನ್ನು ಸೇರಿ ಅಸ್ಥಿತ್ವಕ್ಕಾಗಿ ತಡಕಾಡುವಾಗ ಮನಸ್ಸನ್ನು ಸ್ಥಿರ ವಿಷಯಗಳತ್ತ ಕೇಂದ್ರೀಕರಿಸಬೇಕಾಗುತ್ತೆ. ಅಲ್ಲೂ ವಿಫಲತೆ ಕಾಡಿದರೆ.....ಮನಸ್ಸನ್ನು ಸಾಂತ್ವನಗೊಳಿಸುವ ಕಾಯಕ ಬುದ್ಧಿಯಿಂದಾಗಬೇಕು. ಮನಸ್ಸಿನಲ್ಲಿ ಮೂದಿದ ಎಲ್ಲಾ ಭಾವನೆಗಳನ್ನು ಬುದ್ದಿಯೆಂಬ ಕನ್ನಡಿಯ ಮೇಲೆ ಪ್ರತಿಫಲಿಸಿ ನೋಡುವಂತವರಾಗಬೇಕು. ಅಲ್ಲೂ ಮಿಥ್ಯ ಪ್ರತಿಬಿಂಬ ಕಾಡಿದರೆ...ವಾಸ್ತವದ ಕಹಿಯನ್ನು ಅನುಭವಿಸಲು ವೇದಿಕೆಯನ್ನು ನಿರ್ಮಿಸಿಕೊಳ್ಳಬೇಕು. ಬದುಕಿನ ಏರಿಳಿತಗಳ ನಡುವೆ ಹೊಂದಿಕೊಳ್ಳುವ ಮನ:ಸ್ಥಿತಿಯನ್ನು ನಾವೇ ನಿರ್ಮಿಸಿಕೊಳ್ಳಬೇಕು. ಎಷ್ಟೆಂದರೂ, ನಮ್ಮ ಬದುಕಿನ ನಿರ್ಮಾತ್ರರು ನಾವೇ ಆಗಿರುವಾಗ, ನಮ್ಮ ಮನಸ್ಸಿನ ಯೋಚನೆ-ಯೋಜನೆಗಳ ನಿರ್ಮಾತ್ರರು ನಾವೇ ಆಗದಿದ್ದಲ್ಲಿ ಬದುಕು ಹಸನಾಗುವುದಾದರೂ ಹೇಗೆ?.
ಅದೇನೆ ಇರಲಿ. ಓ ಮನಸೇ......ನಿಜವಾಗಿಯೂ ನಿನ್ನ ವಿಸ್ತಾರಕ್ಕೆ, ವಿಶಾಲಕ್ಕೆ, ಚಲನಶೀಲತೆಗೆ, ವ್ಯಾಪಕತೆಗೆ, ನಿರಂತರತೆಗೆ, ನಿತ್ಯಾಚಾರಕ್ಕೆ, ಸ್ಪಂದನಕ್ಕೆ, ಸಾರ್ವಬೌಮತ್ವಕ್ಕೆ, ಕ್ಷಣಿಕತೆಗೆ, ನಿರ್ಲಿಪ್ತತತೆಗೆ, ಒಂಟಿತನಕ್ಕೆ, ವೈಶಿಷ್ಟತೆಗೆ ಬೆರಗಾಗಿ ಎಷ್ಟೋ ಬಾರಿ ಯೋಚಿಸಿದ್ದೇನೆ!. ಅಲ್ಲೂ ನಿನ್ನದೇ ಇಣುಕು ನೋಟ ಕಾಡುತ್ತಿರುತ್ತದೆ. ಬದುಕಿನ ಪ್ರತಿ ಹೆಜ್ಜೆಗಳು ನಿನ್ನ ನಿರ್ಧಾರದ ಮೇಲೆಯೇ ಪ್ರತಿಫಲಿತವಾಗುತ್ತೆ. ಅದೆಷ್ಟೋ ಯೋಚಿಸಿದ ಮೇಲೆ ನಿನ್ನನ್ನು ಅಸ್ಥಿರ ಎನ್ನದೆ ಬೇರೆ ದಾರಿಯಿಲ್ಲ. ಅದರೂ....ಮನಸ್ಸಿನ ಅಸ್ಥಿರತೆ ಬದುಕಿಗೆ ವ್ಯಾಪಕತೆ ಕೊಟ್ಟಿದೆ. ಕೆಲವೊಮ್ಮೆ ಸಮತಲಕ್ಕಿಂತ ವಕ್ರ ಮೇಲ್ಮೈ ಸೌಂದರ್ಯ ಅನ್ನಿಸುತ್ತೆ. ನುಣುಪು ಹೆಚ್ಚಾದಂತೆಲ್ಲಾ ಜಾರುವಿಕೆ ಹೆಚ್ಚುತ್ತೆ. ಅದರೆ....ವಕ್ರತೆಯೂ ಬದುಕಿನ ಸರ್ವಸ್ವ ಆಗಲಾರದು. ಆದರೂ ಅರ್ಧ ಸತ್ಯವನ್ನು ಮಾತ್ರ ಬಿಚ್ಚಿಡುತ್ತೆ. ಒಟ್ಟಾರೆ ಮನಸ್ಸಿನ ಅಸ್ಥಿರತೆಯೂ ಒಂತರಾ ದ್ವಂದ್ವ ಅನ್ನಿಸುತ್ತೆ ಅಲ್ವಾ?..
ನಿಮ್ಮ
ದಿನು